ADVERTISEMENT

ಸೇವಾಲಾಲ ಜಯಂತಿ ಸಂಭ್ರಮ

ಬಂಜಾರ ಸಮುದಾಯದ ಅಭಿವೃದ್ಧಿ, ಸಂಘಟನೆಗೆ ಕುಮಾರಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 11:29 IST
Last Updated 16 ಫೆಬ್ರುವರಿ 2017, 11:29 IST
ಹುಬ್ಬಳ್ಳಿ: ಬಂಜಾರ ಕುಲಗುರು ಸಂತ ಸೇವಾಲಾಲರ 278ನೇ ಜಯಂತ್ಯುತ್ಸವವನ್ನು ನಗರದಲ್ಲಿ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
 
ಉತ್ತರ ಕರ್ನಾಟಕ ಶ್ರೀ ಸೇವಾಲಾಲ ಬಂಜಾರ ಹಿತವರ್ದಕ ಸಂಘ ಹಾಗೂ ಬಂಜಾರ ಯುವ ಸೈನ್ಯದ ಆಶ್ರಯದಲ್ಲಿ ಇಲ್ಲಿನ ಜೆ.ಸಿ.ನಗರದ ಬಂಜಾರ ಭವನದಿಂದ ಪ್ರಾರಂಭವಾದ ಮೆರವಣಿಗೆಯು ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ, ಸ್ಟೇಷನ್‌ ರಸ್ತೆ ಮೂಲಕ ಸಾಗಿ ಮರಳಿ ಬಂಜಾರ ಭವನ ತಲುಪಿತು.
 
ಬಳಿಕ ನಡೆದ ಸಮಾರಂಭದಲ್ಲಿ  ಮಾತನಾಡಿದ ಹಿತವರ್ದಕ ಸಂಘದ ಅಧ್ಯಕ್ಷ ಪಾಂಡುರಂಗ ಪಮ್ಮಾರ, ಸಂತ ಸೇವಾಲಾಲ ಅವರು ಬಂಜಾರ ಸಮಾಜದ ಧ್ವನಿ ಮತ್ತು ಶಕ್ತಿಯಾಗಿದ್ದಾರೆ. ಅವರೊಬ್ಬರ ಮಹಾನ್‌ ಪವಾಡ ಪುರುಷರಾಗಿದ್ದಾರೆ ಎಂದು ಸ್ಮರಿಸಿದರು.
ಬಂಜಾರ ಸಮಾಜ ಶ್ರೀಮಂತವಾದ ಸಂಸ್ಕೃತಿ ಹೊಂದಿದೆ ಎಂದು ಹೇಳಿದರು.
 
ಬಾಗಲಕೋಟೆ ನೀಲಾನಗರದ ಬಂಜಾರ ಮಠದ ಪೀಠಾಧಿಪತಿ ಕುಮಾರಸ್ವಾಮಿ,  ಬಸವಣ್ಣನವರ ಕಾಯಕ ತತ್ವದಲ್ಲಿ ನಂಬಿಕೆ ಇರುವ ಸಮಾಜ ಬಂಜಾರ ಸಮಾಜವಾಗಿದೆ ಎಂದರು.
 
ಹುಬ್ಬಳ್ಳಿ ಬಂಜಾರ ಸೇವಾಲಾಲ್‌ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿ, ಪೂಜಾರಿ ರಾಮಸಿಂಗ್‌ ಮಹಾರಾಜ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುರೇಶ ಕಲಬಾವಿ, ಮಾಜಿ ಕಾರ್ಪೊರೇಟರ್‌ ಯಮನೂರು ಗುಡಿಹಾಳ, ಬಸವರಾಜ ಅಮ್ಮಿನಭಾವಿ, ಹೇಮಾವತಿ ಬಾಯಿ, ಪಾರ್ವತಿಬಾಯಿ, ಪ್ರಭುದೇವ ಬಮ್ಮನಪಾದ ಉಪಸ್ಥಿತರಿದ್ದರು.
 
ಆಕರ್ಷಕ ನೃತ್ಯ: ಸಂಜೆ ಹುಬ್ಬಳ್ಳಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಬಂಜಾರ ಕಾಲೊನಿಯಲ್ಲಿ ಸಂತ ಸೇವಾಲಾಲ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ನಾಯಕ ಹಾಗೂ ತಂಡದವರು  ನೃತ್ಯ ಪ್ರದರ್ಶಿಸಿದರು. 
 
ಜಾನಪದ ಕಲಾವಿದರಾದ ರಾಮು ಮೂಲಗಿ ಮತ್ತು ಆನಂದ ಜೋಗಿ ಅವರಿಂದ ವಿಶೇಷ ‘ಜಾನಪದ ಸಂಜೆ’ ಕಾರ್ಯಕ್ರಮ ನಡೆಯಿತು. 
ಬಂಜಾರ ಕಾಲೊನಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೇವಾಲಾಲ ಮತ್ತು ಮರಿಯಮ್ಮ ಕುರಿತು ರೂಪಕ ಮತ್ತು ವಿವಿಧ ನೃತ್ಯ ಪ್ರದರ್ಶಿಸಿದರು.
 
* ಬಂಜಾರ ಸಮಾಜದವರು ಎಂದಿಗೂ ಎದೆಗುಂದಬಾರದು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಮುಂದುವರಿಯಬೇಕು
-ಕುಮಾರಸ್ವಾಮಿ, ಪೀಠಾಧಿಪತಿ, ಬಂಜಾರ ಮಠ, ಬಾಗಲಕೋಟೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.