ADVERTISEMENT

ಹಂದಿ ಹಾವಳಿ ತಡೆ: 10 ದಿನಗಳ ಗಡುವು

ಮಹಾನಗರಪಾಲಿಕೆ ತುರ್ತು ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 19 ಜೂನ್ 2014, 6:59 IST
Last Updated 19 ಜೂನ್ 2014, 6:59 IST

ಹುಬ್ಬಳ್ಳಿ: ಧಾರವಾಡದ ರಾಜೀವನಗರದಲ್ಲಿ ಚಿಕ್ಕಮಕ್ಕಳ ಮೇಲೆ ನಡೆದ ಹಂದಿಗಳ ದಾಳಿಯಿಂದ ಎಚ್ಚೆತ್ತುಕೊಂಡಿರುವ ಮಹಾನಗರ ಪಾಲಿಕೆ, ಹಂದಿಗಳ ಹಾವಳಿಯನ್ನು ನಿರ್ಮೂಲನೆ ಮಾಡಲು ನಿರ್ಧರಿಸಿದೆ. ಜೊತೆಗೆ, ಸಾರ್ವಜನಿಕ­ರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ನಾಯಿ ಮತ್ತು ಬಿಡಾಡಿ ದನಗಳನ್ನು ಸಹ ನಗರದಾಚೆ ಹಾಕಲು ನಿರ್ಧರಿಸಿದೆ.

ಈ ಸಂಬಂಧ ಬುಧವಾರ ತುರ್ತು ಸಭೆ ನಡೆಸಿದ ಮೇಯರ್ ಶಿವು ಹಿರೇಮಠ, 10 ದಿನಗಳ ಒಳಗಾಗಿ ಹಂದಿ, ನಾಯಿ ಮತ್ತು ಬಿಡಾಡಿ ದನಗಳ ಹಾವಳಿಯನ್ನು ತಡೆಗಟ್ಟುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಂದಿಗಳನ್ನು ಮೂರು ದಿನಗಳ ಒಳಗಾಗಿ ನಗರ­ದಿಂದ ಹೊರಗೆ ಸಾಗಿಸುವ ಸಂಬಂಧ ಹಂದಿಗಳ ಮಾಲೀಕರಿಗೆ ನೋಟಿಸ್‌ ನೀಡಬೇಕು. ತಪ್ಪಿದಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲ ಹಂದಿಗಳನ್ನು ಪಾಲಿಕೆಯೇ ಹೊರಗೆ ಸಾಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದರು.

ಸಾಕು ನಾಯಿ ಮತ್ತು ಬಿಡಾಡಿ ದನಗಳ ಮಾಲೀಕರಿಗೂ ಎಚ್ಚರಿಕೆ ನೀಡಬೇಕು. ಸಾಕು ನಾಯಿಗಳಿಗೆ ಮೂರು ದಿನಗಳ ಒಳಗಾಗಿ ಬೆಲ್ಟ್‌ ಅಳವಡಿಸಬೇಕು. ಬೆಲ್ಟ್‌ ಅಳವಡಿಸದ ನಾಯಿಗಳ ಹಾಗೂ ಬಿಡಾಡಿ ದನಗಳಿಗೆ ಸಂಬಂಧಿಸಿದಂತೆ ಸಹ ಇದೇ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

‘ಹತ್ತು ದಿನಗಳ ಕಾಲ ಅಧಿಕಾರಿಗಳು ಬೇರೆ ಯಾವುದೇ ಕೆಲಸ ಮಾಡುವುದು ಬೇಡ. ಹಂದಿ, ನಾಯಿಗಳ ನಿರ್ಮೂಲನೆಗೆ ಸಮಯ ಮೀಸಲಿಡಬೇಕು. ಈ ಕಾರ್ಯಾಚರಣೆ ಸಂದರ್ಭ­ದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಪೊಲೀಸ್ ರಕ್ಷಣೆ ಒದಗಿಸಲಾಗುವುದು’ ಎಂದರು.
ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಕೆಲ ಹೊತ್ತು ಚರ್ಚೆ ನಡೆಯಿತು. ಈ ಹಿಂದೆ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದರು.

‘ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಹೊರತು ಹಂದಿಗಳ ನಿರ್ಮೂಲನೆ ಸಾಧ್ಯವಿಲ್ಲ. ನಿಮ್ಮ ಕೈಲಿ ಈ ಕಾರ್ಯ ಆಗದಿದ್ದರೆ ಪಾಲಿಕೆಗೆ ನಿಮ್ಮ ಸೇವೆ ಅಗತ್ಯವಿಲ್ಲ’ ಎಂದು ಹಿರಿಯ ಸದಸ್ಯ ಡಾ.ಪಾಂಡುರಂಗ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ‘ಕಣ್ಣೆದುರಿಗೇ ಹಂದಿ, ನಾಯಿಗಳ ಹಿಂಡು ಕಾಣಿಸಿದರೂ ಪಾಲಿಕೆ ವೈದ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಆರೋಗ್ಯ ನಿರೀಕ್ಷಕರು ಏನೂ ಕ್ರಮ ಕೈಗೊಂಡಿಲ್ಲ. ಹಂದಿಗಳ ಹಾವಳಿ ಹೆಚ್ಚಾಗಲು ಡಾ.ಬಿರಾದಾರ ಅವರೇ ನೇರ ಹೊಣೆ’ ಎಂದು ವಿರೋಧ ಪಕ್ಷದ ನಾಯಕ ಯಾಸಿನ್‌ ಹಾವೇರಿಪೇಟ ಆರೋಪಿಸಿದರು.

ಎಸಿಪಿ ಎನ್‌.ಡಿ.ಬಿರ್ಜೆ ಮಾತನಾಡಿ, ‘ಹಂದಿ­ಗಳನ್ನು ನಗರದಿಂದ ಹೊರಗೆ ಹಾಕುವ ಕಾರ್ಯಾ­ಚರಣೆ ಕುರಿತು ಒಂದು ದಿನ ಮುಂಚಿತವಾಗಿ ತಿಳಿಸಬೇಕು. ಅಗತ್ಯ ಬಿದ್ದರೆ ಮುಂಜಾಗ್ರತಾ ಕ್ರಮವಾಗಿ ಹಂದಿಗಳ ಮಾಲೀಕರನ್ನು ಬಂಧಿಸು­ವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ’ ಎಂದರು. ‘ಹಂದಿಗಳನ್ನು ನಗರದಿಂದ 60 ಕಿ.ಮೀ ದೂರದಲ್ಲಿ ಬಿಟ್ಟು ಬರಬೇಕು’ ಎಂದು ವೀರಣ್ಣ ಸವಡಿ ಹೇಳಿದರು.

‘10 ದಿನಗಳ ಒಳಗಾಗಿ ಹಂದಿಗಳ ಹಾವಳಿಯನ್ನು ತಡೆಗಟ್ಟಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಹೇಳಿದರು. 

ಉಪಮೇಯರ್ ಮಂಜುಳಾ ಅಕ್ಕೂರ, ಬಿಜೆಪಿ ಸಭಾ ನಾಯಕ ಸುಧೀರ್‌ ಸರಾಫ್‌, ಜೆಡಿಎಸ್‌ ಸದಸ್ಯ ಅಲ್ತಾಫ್‌ ನವಾಜ್‌ ಕಿತ್ತೂರ, ಉಪನಗರ ಠಾಣೆ ಅಧಿಕಾರಿ ಆರ್‌.ಕೆ.ಪಾಟೀಲ, ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ, ಪರಿಷತ್‌ ಕಾರ್ಯದರ್ಶಿ ಪಿ.ಡಿ.ಗಾಳೆಮ್ಮನವರ, ವಲಯ ಕಚೇರಿ ಅಧಿಕಾರಿಗಳು ಇದ್ದರು.

ಸೇವೆಯಿಂದ ಬಿಡುಗಡೆ ಮಾಡಿ: ಡಾ.ಬಿರಾದಾರ

ಹುಬ್ಬಳ್ಳಿ: ‘ಹಂದಿಗಳ ಹಾವಳಿ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ಮಾಡಿಯೂ ವಿಫಲನಾಗಿ­ದ್ದೇನೆ. ಮಾತೃ ಇಲಾಖೆಯ ಒತ್ತಡವೂ ಹೆಚ್ಚಾ­ಗಿದೆ. ಹೀಗಾಗಿ ನನ್ನನ್ನು ಸೇವೆಯಿಂದ ಬಿಡುಗಡೆ ಮಾಡಿ’ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಪ್ರಭು ಬಿರಾದಾರ ಮನವಿ ಮಾಡಿದ ಪ್ರಸಂಗವೂ ನಡೆಯಿತು.

ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಾ.ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ‘ಅವರಿಂದ ಕೆಲಸ ಮಾಡಲು ಆಗದಿದ್ದರೆ ಸೇವೆಯಿಂದ ಬಿಡುಗಡೆ ಮಾಡಿ’ ಎಂದು ಹೇಳಿದರು.  ‘ಜವಾಬ್ದಾರಿಯಿಂದ ನುಣುಚಿ­ಕೊಳ್ಳು­ವುದು ಸರಿಯಲ್ಲ. ಹಂದಿಗಳ ಹಾವಳಿ ತಡೆ­ಯಲು ಕ್ರಮ ಕೈಗೊಳ್ಳಬೇಕು’ ಎಂದು ಪಾಲಿಕೆ ಆಯುಕ್ತ ರಮಣದೀಪ ಚೌಧರಿ ಹೇಳಿದರು.

‘ಪಾಲಿಕೆ ಸೇವೆಯಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಲಿಖಿತವಾಗಿ ತಿಳಿಸಿ. ಆರೋಗ್ಯಾ­ಧಿಕಾರಿ ಹುದ್ದೆ ಇಲ್ಲವೇ ಪಾಲಿಕೆ ಸೇವೆಯಿಂದಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಮೇಯರ್‌ ಶಿವು ಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT