ADVERTISEMENT

ಹೂಳು ತುಂಬಿದ ತೋರಣಗಟ್ಟಿ ಕೆರೆಗೆ ಬೇಕಿದೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 6:36 IST
Last Updated 10 ಜನವರಿ 2017, 6:36 IST
ಕುಂದಗೋಳ: ಪಟ್ಟಣದ ಮಧ್ಯ ಭಾಗದಲ್ಲಿ ಬಸ್‌ ನಿಲ್ದಾಣದ ಸಮೀಪ ಇರುವ ತೋರಣಗಟ್ಟಿ ಕೆರೆಯಲ್ಲಿ ಬೇಕಾಬಿಟ್ಟಿಯಾಗಿ ಬಿಸಾಡುತ್ತಿರುವ ತ್ಯಾಜ್ಯ ವಸ್ತುಗಳಿಂದಾಗಿ ಹಾಳಾಗುತ್ತಿರುವ ಕೆರೆಯನ್ನು ರಕ್ಷಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ.
 
ತ್ಯಾಜ್ಯ ವಸ್ತುಗಳಿಂದ ದುರ್ನಾತ­ದಿಂದಾಗಿ ಸುತ್ತಮುತ್ತಲಿನ ಜನತೆ ಪ್ರತಿನಿತ್ಯ ತೊಂದರೆ ಅನುಭವಿ­ಸುತ್ತಿ­ದ್ದಾರೆ. ಪಟ್ಟಣ ಪಂಚಾಯ್ತಿ ಇದರ ಬಗ್ಗೆ ಕಾಳಜಿ ವಹಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
 
ತೋರಣಗಟ್ಟಿ ಕೆರೆ ಸಿಟಿಎಸ್ ನಕ್ಷೆಯ ಪ್ರಕಾರ 5 ಎಕರೆಗೂ ಹೆಚ್ಚು ವಿಶಾಲ ಪ್ರದೇಶ ಹೊಂದಿದೆ. ಕೆರೆಯ ಪಕ್ಕದಲ್ಲೇ ಇರುವ ಬಸ್‌ ನಿಲ್ದಾಣಕ್ಕೆ ಹೋಗುವವರು, ಕೆರೆಯಿಂದ ಬರುವ ವಾಸನೆಯನ್ನು ತಡೆದುಕೊಳ್ಳಲಾಗದೇ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.
 
ಪಟ್ಟಣದ ಮಧ್ಯ ಭಾಗದಲ್ಲಿರುವ ತೋರಣಗಟ್ಟಿ ಕೆರೆ ಬೀಸಾಡುತ್ತಿರುವ ತಾಜ್ಯವಸ್ತುಗಳ ದುರ್ನಾತದಿಂದ ಸುತ್ತಮುತ್ತಲಿನ ಜನತೆ ಪ್ರತಿ ನಿತ್ಯ ತೊಂದರೆಯನ್ನು ಅನುಭವಿಸುತ್ತಿದೆ. ಪಟ್ಟಣವನ್ನು ಶುಚಿಯಾಗಿಡಬೇಕಾದ ಪಟ್ಟಣ ಪಂಚಾಯ್ತಿಯವರು ಇದರ ಬಗ್ಗೆ ನಿರ್ಲಕ್ಷ್ಯವಹಿಸಿರುವದು ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
 
ಬಸ್ ನಿಲ್ದಾಣದ ಸುತ್ತಮುತ್ತಲಿರುವ ವಿವಿಧ ಅಂಗಡಿಗಳ ಮಾಲೀಕರು ಕಸ ಕಡ್ಡಿಗಳನ್ನು ಹಾಗೂ ಚಿಕನ್, ಮಟನ್, ಕಬಾಬ್ ಮಾರಾಟ ಮಾಡುವ ವ್ಯಾಪಾರಸ್ಥರು ಅಂಗಡಿ ಮುಚ್ಚುವ ಸಮಯದಲ್ಲಿ ತ್ಯಾಜ್ಯ ವಸ್ತುಗಳನ್ನು ಕೆರೆಯಲ್ಲಿ ಎಸೆಯುತ್ತಿರುವುದರಿಂದ ಇಲ್ಲಿ ಗಬ್ಬು ವಾಸನೆ ಹರಡುವಂತಾಗಿದೆ.
 
ಉತ್ತಮ ಮಳೆ ಬಿದ್ದರೆ ಕೆರೆ ತುಂಬಿ ವರ್ಷವಿಡೀ ಪಟ್ಟಣದ ರೈತರಿಗೆ ದನ ಕರುಗಳನ್ನು ತಂದು ನೀರು ಕುಡಿಸಿ ಮೈತೊಳೆಯಲು ಬಳಸಬಹುದು. ಜತೆಗೆ ಬಟ್ಟೆ ಒಗೆಯಲು ಸಹ ಕೆರೆಯ ಬಳಕೆ ಆಗುತ್ತದೆ. ಆದರೆ ಕಳೆದ ಐದು ವರ್ಷಗಳಿಂದ ಸರಿಯಾಗಿ ಮಳೆ ಬೀಳದೇ ಕೆರೆಯಲ್ಲಿ ನೀರು ಇಲ್ಲದಂತಾಗಿ ಇದು ತ್ಯಾಜ್ಯ ವಸ್ತುಗಳನ್ನು ಬಿಸಾಡುವ ತಾಣವಾಗಿ ಪರಿಣಮಿಸಿದೆ.
 
ಇದರಲ್ಲಿ ಕಸ ಕಡ್ಡಿಗಳನ್ನು ಚೆಲ್ಲಬೇಡಿ ಎಂದು ಸಂಬಂಧಿಸಿದ ಅಧಿಕಾರಿ­ಗಳಾಗಲಿ ಪಟ್ಟಣ ಪಂಚಾಯ್ತಿ­ಯವರಾಗಲಿ ಇಲ್ಲಿನ  ವ್ಯಾಪಾರಸ್ಥರಿಗೆ ನೋಟೀಸ್ ಜಾರಿಗೊಳಿಸಿಲ್ಲ. ಹೀಗಾಗಿ ತ್ಯಾಜ್ಯ ವಸ್ತುಗಳನ್ನು ಬಳಸುವುದು ಅಬಾಧಿತವಾಗಿ ಮುಂದುವರಿದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 
 
**
ತೋರಣಗಟ್ಟಿ ಕೆರೆಯ ಹೂಳು ತೆಗೆಯುವಂತಾ ಕೆಲಸ ಮಾಡಿ ನೀರು ತುಂಬಿಸಿದರೆ ಇಲ್ಲಿನ ರೈತರ ದನಕರುಗಳಿಗೆ ಸಹಾಯವಾಗುವದರ ಜೊತೆಗೆ  ಅಂತರ್ಜಲಮಟ್ಟವನ್ನು ಹೆಚ್ಚಿಸಲು ಸಹಾಯವಾಗುತ್ತದೆ.
-ಚಂದ್ರಕಾಂತ ಕಟಗಿ,
ರೈತ, ಕುಂದಗೋಳ
 
***
ಪಟ್ಟಣ ಪಂಚಾಯ್ತಿಯಲ್ಲಿ ಅನುದಾನದ ಕೊರತೆ ಇದ. ಬರ ಕಾಮಗಾರಿ ಯೋಜ­ನೆ­ಯಡಿ ಇದನ್ನು ಕೈಗೆತ್ತಿಕೊಂಡು ರೈತರ ದನಕರುಗಳಿಗೆ ಅನುಕೂಲ ಕಲ್ಪಿಸಿ­ಕೊಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇವೆ
-ಮಲ್ಲಿಕಾರ್ಜುನ ಕಿರೇಸೂರ,
ಅಧ್ಯಕ್ಷರು, ಪಟ್ಟಣ ಪಂಚಾಯ್ತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.