ADVERTISEMENT

‘ವೇಮನ ಅಧ್ಯಯನ ಪೀಠಕ್ಕೆ ₨1 ಕೋಟಿ’

​ಪ್ರಜಾವಾಣಿ ವಾರ್ತೆ
Published 20 ಜನವರಿ 2015, 5:59 IST
Last Updated 20 ಜನವರಿ 2015, 5:59 IST
ಹುಬ್ಬಳ್ಳಿಯ ವೇಮನ ವಿದ್ಯಾವರ್ಧಕ ಸಂಘದಿಂದ ಸೋಮವಾರ ನಡೆದ ವೇಮನರ 603ನೇ ಜಯಂತ್ಯುತ್ಸವದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ವೇಮನರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ತೆಲುಗು ಕವಿ ಎನ್.ಗೋಪಿ, ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್, ಕರ್ನಾಟಕ ವಿವಿ ಕುಲಪತಿ ಡಾ.ಎಸ್.ಎಸ್.ಹೂಗಾರ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ.  ಎರೇಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಇದ್ದಾರೆ
ಹುಬ್ಬಳ್ಳಿಯ ವೇಮನ ವಿದ್ಯಾವರ್ಧಕ ಸಂಘದಿಂದ ಸೋಮವಾರ ನಡೆದ ವೇಮನರ 603ನೇ ಜಯಂತ್ಯುತ್ಸವದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ವೇಮನರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ತೆಲುಗು ಕವಿ ಎನ್.ಗೋಪಿ, ಶಾಸಕರಾದ ಜಿ.ಎಸ್.ಪಾಟೀಲ, ಬಿ.ಆರ್.ಯಾವಗಲ್, ಕರ್ನಾಟಕ ವಿವಿ ಕುಲಪತಿ ಡಾ.ಎಸ್.ಎಸ್.ಹೂಗಾರ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ. ಎರೇಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಇದ್ದಾರೆ   

ಹುಬ್ಬಳ್ಳಿ: ರಡ್ಡಿ ಸಮುದಾಯದ ಶಾಸಕರ ಒತ್ತಾಸೆ­ಯಂತೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಅಧ್ಯಯನ ಪೀಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ₨1 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾ­ಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ಇಲ್ಲಿನ ವೇಮನ ವಿದ್ಯಾವರ್ಧಕ ಸಂಘದಿಂದ ಸೋಮವಾರ ನಡೆದ ವೇಮನರ 603ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ವಿಶ್ವವಿದ್ಯಾಲಯದ ವೇಮನ ಅಧ್ಯ­ಯನ ಪೀಠ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಅಲ್ಲಿ ಸಂಶೋಧನೆ ಹಾಗೂ ತತ್ವ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

ವೇಮನರ ಸ್ಮರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ತಿಂಗಳುಗಟ್ಟಲೇ ವೇಮನರ ಜಯಂತಿ ಆಚರಿಸಬೇಕಿದೆ. ಬಸವೇ­ಶ್ವರರನ್ನು ಪರಿಚಯಿಸಿದ ರೀತಿಯೇ ವೇಮನರ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ವೇಮನರ ತತ್ವ–ಸಿದ್ಧಾಂತಗಳ ವಿಮರ್ಶೆ, ಸಂಶೋಧನೆ ಹಾಗೂ ಸಾಹಿತ್ಯದ ಸಂಗ್ರಹ ಕೆಲಸ ರಾಜ್ಯದಲ್ಲಿ ನಡೆದಷ್ಟು ನೆರೆಯ ಆಂಧ್ರಪ್ರದೇಶದಲ್ಲಿ ನಡೆದಿಲ್ಲ ಎಂದು ಹೇಳಿದ ಅವರು, ತೆಲುಗು ಭಾಷೆ­ಯಲ್ಲೂ ವೇಮನರ ಸಾಹಿತ್ಯದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬೇಕಿದೆ. ತೆಲುಗಿನಲ್ಲಿರುವ ವೇಮನರ ಸಾಹಿತ್ಯ­ವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ಆಗಬೇಕಿದೆ ಎಂದರು.

ವೇಮನರು ಶ್ರೇಷ್ಠ ತತ್ವಜ್ಞಾನಿಯಾಗಿದ್ದು, ಆತನನ್ನು ಅರ್ಥ ಮಾಡಿಕೊಳ್ಳದೇ ಬೇರೆ ಬೇರೆ ಅರ್ಥ­ದಲ್ಲಿ ಆತನನ್ನು ನೋಡುವ ಕೆಲಸ ಮಾಡಿದರು ಎಂದು ಹೇಳಿದರು.

ಸಮಾರಂಭದಲ್ಲಿ ತೆಲುಗು ಕವಿ ಎನ್.ಗೋಪಿ ಮಾತನಾಡಿ, ವೇಮನ ತಾತ್ವಿಕತೆಯನ್ನು ಬದುಕಿಗೆ ಅಳವಡಿಸಿಕೊಂಡರೆ ನೆಮ್ಮದಿ ಕಾಣಲು ಸಾಧ್ಯ. ವಚನ ಸಾಹಿತ್ಯದ ರೀತಿ ವೇಮನ ಸಾಹಿತ್ಯದ ಆಳ ಅಧ್ಯಯನದ ಅಗತ್ಯವಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸರ್ಕಾರದಿಂದಲೇ ಶುದ್ಧ ನೀರು ಪೂರೈಕೆ ಆಂದೋಲನದ ರೀತಿ ನಡೆಯುತ್ತಿರುವುದು ಶ್ಲಾಘನೀಯ ಕೆಲಸ ಎಂದರು.
ರಡ್ಡಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ವಿ.ಬಿ.ನಾಗನೂರ, ವೈ.ಬಿ.ಆಲೂರ, ಪ್ರೊ.ಕೆ.ಎಂ.­ತಿಮ್ಮನ­ಗೌಡರ, ವಿ.ಎಚ್.ಶಿರೋಳ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎರೇಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ, ಹುಬ್ಬಳ್ಳಿಯ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಸ್.ಹೂಗಾರ, ಮಹಾನಗರ ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಿ.­ಎಸ್.ಗಡ್ಡದೇವರಮಠ, ನರಗುಂದ ಶಾಸಕ ಬಿ.ಆರ್.ಯಾವಗಲ್, ರೋಣ ಶಾಸಕ ಜಿ.ಎಸ್.ಪಾಟೀಲ, ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಚ್.ವಿ.ಮಾಡಳ್ಳಿ, ರಡ್ಡಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಲ್.ಪಾಟೀಲ, ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಬಿ.­ನಾಗನೂರ, ಕಾರ್ಯದರ್ಶಿ ಎಸ್.ಜಿ.ಕುರಡಗಿ, ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಹಾಜ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.