ADVERTISEMENT

150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ

ಕೇಂದ್ರ ಸಂಸ್ಕೃತಿ ಮತ್ತು ಪರಿಸರ ರಾಜ್ಯ ಸಚಿವ ಡಾ.ಮಹೇಶ್‌ ಶರ್ಮಾ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 10:40 IST
Last Updated 19 ಮಾರ್ಚ್ 2018, 10:40 IST
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಕೇಂದ್ರ ಸಚಿವ ಡಾ.ಮಹೇಶ್‌ ಶರ್ಮಾ ಮಾತನಾಡಿದರು. ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಇದ್ದರು.
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಕೇಂದ್ರ ಸಚಿವ ಡಾ.ಮಹೇಶ್‌ ಶರ್ಮಾ ಮಾತನಾಡಿದರು. ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಇದ್ದರು.   

ಹುಬ್ಬಳ್ಳಿ: ‘ಮೋದಿ ಮತ್ತು ಅಮಿತ್‌ ಶಾ ಅವರ ಬೆಂಬಲವಿಲ್ಲದೇ 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 110 ಸ್ಥಾನ ಜಯಿಸಿ, ಸರ್ಕಾರ ರಚಿಸಿತ್ತು. ಈಗ ಅವರಿಬ್ಬರ ಆನೆಬಲ ಜೊತೆಗಿರುವುದರಿಂದ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವುದು ನಿಶ್ಚಿತ’ ಎಂದು ಕೇಂದ್ರ ಸಂಸ್ಕೃತಿ ಮತ್ತು ಪರಿಸರ ರಾಜ್ಯ ಸಚಿವ ಡಾ.ಮಹೇಶ್‌ ಶರ್ಮಾ ಹೇಳಿದರು.

ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಶನಿವಾರ ನಡೆದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘2013ರ ಚುನಾವಣೆಯಲ್ಲಿ ಕೆಜೆಪಿ, ಬಿಜೆಪಿಯಿಂದಾಗಿ ಕಡಿಮೆ ಸೀಟು ಬಂದವು. ರಾಜ್ಯದಲ್ಲಿ ಪಕ್ಷ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮುಖಂಡರು, ಕಾರ್ಯಕರ್ತರು ಅತಿಯಾದ ಆತ್ಮವಿಶ್ವಾಸದಿಂದ ಮನೆಯಲ್ಲಿ ಮಲಗದೆ ಪಕ್ಷ ಸಂಘಟನೆಗೆ ಒತ್ತು ನೀಡಬೇಕು’ ಎಂದರು.

ADVERTISEMENT

ಉತ್ತರಪ್ರದೇಶ, ತ್ರಿಪುರಾ, ಹರಿಯಾಣದಲ್ಲಿ ಬಿಜೆಪಿ ಗೆಲ್ಲಲು ಕಾರಣವಾದ ಸಂಗತಿ ಮತ್ತು ಪಕ್ಷ ಸಂಘಟನೆಯ ಅನುಭವಗಳ ಕುರಿತು ಕಾರ್ಯಕರ್ತರೊಂದಿಗೆ ಸಚಿವರು ಚರ್ಚಿಸಿದರು.

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ‘ಚುನಾವಣೆಯ ಸ್ಥಿತಿಗತಿ ಅಧ್ಯಯನ ಮತ್ತು ಸೂಕ್ತ ಮಾರ್ಗದರ್ಶನ ನೀಡಲು ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು 30 ಕೇಂದ್ರ ಸಚಿವರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ’ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾ.ನಾಗರಾಜ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡ ವೀರಭದ್ರಪ್ಪ ಹಾಲಹರವಿ, ಅಶೋಕ ಕಾಟವೆ, ಮೇಯರ್‌ ಸುಧೀರ ಸರಾಫ್‌, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಡಿ.ಕೆ.ಚವ್ಹಾಣ, ಶಿವು ಮೆಣಸಿನಕಾಯಿ, ಮುಖಂಡರಾದ ರಂಗಾ ಬದ್ದಿ, ಮಹೇಶ ಟೆಂಗಿನಕಾಯಿ, ಮಲ್ಲಿಕಾರ್ಜುನ ಸಾವಕಾರ, ದತ್ತಮೂರ್ತಿ ಕುಲಕರ್ಣಿ, ಸುರೇಶ ಶೇಜವಾಡಕರ ಇದ್ದರು.
**
ಅತಿಯಾದ ಆತ್ಮವಿಶ್ವಾಸದಿಂದ ಸೋಲು: ಶರ್ಮಾ
ಹುಬ್ಬಳ್ಳಿ: ‘ಉತ್ತರ ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಲು ಅತಿಯಾದ ಆತ್ಮವಿಶ್ವಾಸ ಕಾರಣ’ ಎಂದು ಕೇಂದ್ರ ಸಚಿವ ಡಾ.ಮಹೇಶ ಶರ್ಮಾ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಸೋಲು ಕಂಡಿರುವುದರಿಂದ ಬಿಜೆಪಿಗೆ ಹಿನ್ನೆಡೆಯಾಗಿದೆ ಎಂದು ಭಾವಿಸುವ ಅಗತ್ಯವಿಲ್ಲ’ ಎಂದರು.

‘ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಹೋಗಿರುವುದು ರಾಜಕೀಯ ಕಾರಣಕ್ಕೆ ಎಂದು ಹೇಳಿದ ಅವರು, ಆಂಧ್ರಪ್ರದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡಲಾಗಿತ್ತು. ಹೀಗಿದ್ದೂ, ಚಂದ್ರಬಾಬು ನಾಯ್ಡು ಹೊರ ಹೋಗಿದ್ದಾರೆ’ ಎಂದರು.

‘ದೇಶದಲ್ಲಿ ತೃತೀಯ ರಂಗಕ್ಕೆ ಭವಿಷ್ಯವಿಲ್ಲ. ಈಗಾಗಲೇ ತ್ರಿಪುರ, ಉತ್ತರಪ್ರದೇಶದಲ್ಲಿ ಸೋಲಾಗಿದೆ. ಮುಂದಿನ ದಿನಗಳಲ್ಲಿ ಕೇರಳ, ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.