ADVERTISEMENT

'ಮತ–ಪಂಥಗಳಿವೆ, ಹಿಂದೂಧರ್ಮ ಎನ್ನುವುದಿಲ್ಲ’

ಬಸವದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ನಿಜಗುಣಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 7:10 IST
Last Updated 1 ಜನವರಿ 2018, 7:10 IST

ಧಾರವಾಡ: 'ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದ ಸಿದ್ಧಾಂತ ಇರುತ್ತದೆ. ಹಿಂದೂಸ್ತಾನದಲ್ಲಿ ವಾಸಿಸುವ ಜನರಲ್ಲಿ ಅವರವರ ಆಚರಣೆಗೆ ತಕ್ಕಂತೆ ಸ್ಥಾಪಿಸಲ್ಪಟ್ಟ ಪ್ರಾದೇಶಿಕ ಮತ, ಪಂಥಗಳಿವೆಯೇ ಹೊರತು ಹಿಂದು ಧರ್ಮ ಎನ್ನುವುದಿಲ್ಲ. ಜೈನ, ಬೌದ್ಧ, ಸಿಖ್ ಧರ್ಮಗಳಲ್ಲಿ ಆಚಾರ ವಿಚಾರಗಳು ವಿಭಿನ್ನವಾಗಿರುವ ಕಾರಣ ಅವು ಇತ್ತೀಚೆಗೆ ಸ್ವತಂತ್ರ ಧರ್ಮಗಳಾಗಿವೆ. ಉತ್ತರ ಭಾರತದಲ್ಲಿ ಶೈವ ಪರಂಪರೆಯಿರುವ ಕಾರಣ ವೀರಶೈವ ಕೂಡ ಒಂದು ಮತವಾಗಿದೆ' ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ಇಲ್ಲಿನ ಹುರಕಡ್ಲಿ ಮಹಾವಿದ್ಯಾಲಯದ ಆವರಣಲ್ಲಿ ನಡೆಯುತ್ತಿರುವ ಬಸವದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ‘ಲಿಂಗಾಯತ ಧರ್ಮಕ್ಕೆ ಬಸವಣ್ಣನವರೇ ಧರ್ಮಗುರುಗಳು. ಸಮಸ್ತ ಶರಣರ ವಚನಗಳೇ ಧರ್ಮಗ್ರಂಥ, ಇಷ್ಟಲಿಂಗವೇ ದೇವರು, ಕಾಯಕ ದಾಸೋಹ, ಶರಣರ ಸಂಘ, ವಚನಗಳ ಅಧ್ಯಯನ ಮಾರ್ಗದರ್ಶಕಗಳು' ಎಂದರು.

‘ಇಷ್ಟಲಿಂಗ ಜಾತಿಯ ಗುರುತಲ್ಲ. ಅದು ಮಾನವೀಯ ಮೌಲ್ಯ ಬೆಸೆಯುವ ಗುರುತು. ಶತಮಾನಗಳ ಹಿಂದೆ ಇದ್ದ ವೇದ, ಉಪನಿಷತ್ತು, ಆಗಮಗಳನ್ನು 12ನೇ ಶತಮಾನದ ಶರಣರು ಅನುಭವ ಮಂಟಪದಲ್ಲಿ ಚರ್ಚೆ ನಡೆಸಿ, ಶೈವ ಸಿದ್ದಾಂತ ಹಾಗೂ ವೇದ, ಉಪನಿಷತ್ತು, ಆಗಮಗಳನ್ನು ಒಪ್ಪದೆ ಸಮಾಜಕ್ಕೆ ಅನುಕೂಲಕರವಾಗುವ ವೈಚಾರಿಕ ಸಿದ್ದಾಂತಕ್ಕೆ ಬದ್ಧರಾದರು. ಬಸವಾದಿ ಶರಣರ ಪ್ರಯತ್ನದಿಂದ ಸಮಾಜ ಹಾಗೂ ವ್ಯಕ್ತಿ ಸ್ವಾತಂತ್ರ್ಯ, ವರ್ಣ ವರ್ಗ, ಲಿಂಗಭೇದದಂತಹ ವಿಷಯಗಳು ಆತ್ಮವಿಮರ್ಶೆಯ ಜೊತೆಗೆ ವಿಸ್ತಾರಗೊಂಡು ಸಾಮಾಜಿಕ ವಿಮರ್ಶೆಯಾಗಿಯೂ ಪರಿವರ್ತನೆಗೊಂಡವು' ಎಂದರು.

ADVERTISEMENT

‘ಅನುಭವ ಮಂಟಪದಲ್ಲಿ ನಿತ್ಯ ವೈಚಾರಿಕ ಚಿಂತನೆಗಳು ನಡೆದವು. ಅಲ್ಲಿ ನಡೆದ ಚಿಂತನೆ, ಅನುಭಾವ ನುಡಿಗಳು ವಚನಗಳಾಗಿ ರೂಪುಗೊಂಡವು. ಭಕ್ತರಿಗಾಗಿ ಬಸವಣ್ಣನವರು ಧರ್ಮ ರಚಿಸಿದರೆ ಹೊರತು ತಮ್ಮ ಸ್ವಾರ್ಥಕ್ಕಾಗಿ ಅಲ್ಲ ಎಂಬುದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳಬೇಕು. ಜಾತಿ, ಮತ, ಪಂಥಕ್ಕೆ ಮಹತ್ವ ನೀಡದ ಶರಣರು ಮಾನವೀಯತೆಗೆ ಮಹತ್ವ ಕೊಟ್ಟರು. ಅಂಥ ತತ್ವ ಬೋಧಿಸಿದ ಏಕೈಕ ಧರ್ಮ ಲಿಂಗಾಯತ ಧರ್ಮ ಎನ್ನುವುದು ಸತ್ಯ ಸಂಗತಿ. ಶೈವದಲ್ಲಿರುವ ಮತ ಪಂಥಗಳು ಧರ್ಮಗಳಾಗಲು ಸಾಧ್ಯವಿಲ್ಲ’ ಎಂದು ನಿಜಗುಣಪ್ರಭು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.