ADVERTISEMENT

ಗಾಳಿಯಲ್ಲಿ ಗುಂಡು ಹಾರಿಸಿದ ಪಾಲಿಕೆ ಸದಸ್ಯ ಮಸೀದಿ ಜಖಂ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 9:37 IST
Last Updated 20 ಫೆಬ್ರುವರಿ 2018, 9:37 IST
ಧಾರವಾಡದಲ್ಲಿ ಶಿವಾಜಿ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿದ ನಂತರ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಮಂಜುನಾಥ ಕದಂ
ಧಾರವಾಡದಲ್ಲಿ ಶಿವಾಜಿ ಪ್ರತಿಮೆಗೆ ಸೋಮವಾರ ಮಾಲಾರ್ಪಣೆ ಮಾಡಿದ ನಂತರ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಮಂಜುನಾಥ ಕದಂ   

ಧಾರವಾಡ/ ಹೊಸಪೇಟೆ: ಛತ್ರಪತಿ ಶಿವಾಜಿ ಜಯಂತಿ ಆಚರಣೆ ವೇಳೆ ಸೋಮವಾರ ಧಾರವಾಡದಲ್ಲಿ ಪಾಲಿಕೆ ಸದಸ್ಯರೊಬ್ಬರು ತಮ್ಮ ರಿವಾಲ್ವರ್‌ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರೆ, ಬಳ್ಳಾರಿಯ ಕಮಲಾಪುರದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮಸೀದಿ ಮೇಲೆ ಕಲ್ಲು ತೂರಿ, ಕಿಟಕಿ ಗಾಜು ಒಡೆದಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್‌ ಮುಖಂಡರೂ ಆದ ಪಾಲಿಕೆಯ ನಾಮಕರಣ ಸದಸ್ಯ ಮಂಜುನಾಥ ಕದಂ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವಾಗ ಗುಂಡು ಹಾರಿಸಿದರು. ಸ್ಥಳದಲ್ಲಿದ್ದ ಪೊಲೀಸರೂ ರಿವಾಲ್ವರ್‌ ಸದ್ದು ಕೇಳಿ ಕಕ್ಕಾಬಿಕ್ಕಿಯಾದರು. ತಕ್ಷಣ ಕದಂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ‘ಪರವಾನಗಿ ಇದ್ದ ರಿವಾಲ್ವರ್‌ ಆದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಮರಾಠ ವಿದ್ಯಾ ಪ್ರಸಾರಕ ಮಂಡಳದ ಅಧ್ಯಕ್ಷರೂ ಆಗಿರುವ ಕದಂ ಪ್ರತಿಕ್ರಿಯಿಸಿ, ‘ಶಿವಾಜಿ ಉತ್ಸವದ ಸಂದರ್ಭದಲ್ಲಿ ಈ ಹಿಂದಿನ ಅಧ್ಯಕ್ಷರು ಡಬ್ಬಲ್ ಬ್ಯಾರಲ್ ಬಂದೂಕು ತರಿಸಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ನಾನು ಅದೇ ಪರಂಪರೆ ಮುಂದುವರೆಸಿದ್ದೇನೆ’ ಎಂದು ಹೇಳಿದರು. ಆದರೆ, ಮಂಡಳದ ಹಿಂದಿನ ಅಧ್ಯಕ್ಷ ಮೋಹನ ಮೋರೆ ಅದನ್ನು ನಿರಾಕರಿಸಿದ್ದು, ‘ಅಂಥ ಉದ್ಧಟತನ ಪ್ರದರ್ಶಿಸಿರಲಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ.

ADVERTISEMENT

ಮಸೀದಿಗೆ ಕಲ್ಲು: ಕಮಲಾಪುರ ಪಟ್ಟಣದಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಟಿಪ್ಪು ಸುಲ್ತಾನ್‌ ಭಾವ ಚಿತ್ರವಿರುವ ಫಲಕಕ್ಕೆ ಅವಮಾನಗೊಳಿಸಿ, ಮಸೀದಿ ಮೇಲೆ ಕಲ್ಲು ತೂರಿದರು. ಇದರಿಂದ ಕೆರಳಿದ ಮುಸ್ಲಿಮರು ಪ್ರತಿಯಾಗಿ ಪ್ರತಿಭಟನೆ ನಡೆಸಿದರು. ಎರಡೂ ಕಡೆಯವರು ಕೈಯಲ್ಲಿ ದೊಣ್ಣೆ, ಕಲ್ಲುಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದರೂ ಪೊಲೀಸರಿಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ.

ಗುಂಡು ಹಾರಿಸುವುದು ಸಂಪ್ರದಾಯ ಎಂದ ಕಮಿಷನರ್‌

ಧಾರವಾಡ: ‘ಗಾಳಿಯಲ್ಲಿ ಗುಂಡು ಹಾರಿಸುವುದು ಸಂಪ್ರದಾಯ’ ಎಂದು ಹುಬ್ಬಳ್ಳಿ– ಧಾರವಾಡ ಪೊಲೀಸ್ ಕಮಿಷನರ್‌ ಎಂ.ಎನ್.ನಾಗರಾಜ್‌ ಪ್ರತಿಕ್ರಿಯೆ ನೀಡಿದರು.

‘ಶಿವಾಜಿ ಜಯಂತಿ, ವಿಜಯ ದಶಮಿ ಸಂದರ್ಭಗಳಲ್ಲಿ ಕೆಲವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ತಲ್ವಾರ್‌ ಹಿಡಿದು ಬಾಳೆಕಂಬ ಕತ್ತರಿಸುವ ಹಾಗೆ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಅಷ್ಟೇ. ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.