ADVERTISEMENT

ಅಸ್ಪೃಶ್ಯತೆ ನಿವಾರಣೆಗೆ ಸಹಕಾರ ಅಗತ್ಯ

‘ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನೆ ಕಡೆಗೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2017, 9:14 IST
Last Updated 20 ಜನವರಿ 2017, 9:14 IST
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್‌ ಬಡ್ನಿಯಲ್ಲಿ ಗುರುವಾರ ಜರುಗಿದ ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನಾ ಕಡೆಗೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮುತ್ತುರಾಜ್‌ ಕಲಾ ತಂಡದ ಸದಸ್ಯ ಪ್ರದರ್ಶಿಸಿದ ಜಾತಿಭೂತ ಏಕಾಂಕ ನಾಟಕದ ದೃಶ್ಯ
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್‌ ಬಡ್ನಿಯಲ್ಲಿ ಗುರುವಾರ ಜರುಗಿದ ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನಾ ಕಡೆಗೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮುತ್ತುರಾಜ್‌ ಕಲಾ ತಂಡದ ಸದಸ್ಯ ಪ್ರದರ್ಶಿಸಿದ ಜಾತಿಭೂತ ಏಕಾಂಕ ನಾಟಕದ ದೃಶ್ಯ   

ಲಕ್ಷ್ಮೇಶ್ವರ: ನಮ್ಮ ಮನಸ್ಸಿನ ಭಾವನೆಗಳು ಬದಲಾದಾಗ ಮಾತ್ರ ಸಮಾಜದಲ್ಲಿನ ಅಸ್ಪೃಶ್ಯತೆ ತೊಲಗಲು ಸಾಧ್ಯ. 12ನೇ ಶತಮಾನದಲ್ಲಿ ಬಸವಣ್ಣವರು ಮಾಡಿದ ಕ್ರಾಂತಿ ಇಂದಿಗೂ ಮಾದರಿಯಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.

ಇಲ್ಲಿಗೆ ಸಮೀಪದ ಪುಟಗಾಂವ್‌ ಬಡ್ನಿ ಗ್ರಾಮದಲ್ಲಿ ಜಿಲ್ಲಾಡಳಿತ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ನಮ್ಮ ನಡೆ ಅಸ್ಪೃಶ್ಯತಾ ನಿರ್ಮೂಲನೆ ಕಡೆಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ ಆಧಾರಿತ ಮೂಲ ಕುಲಕಸುಬು ನಮ್ಮ ಸಂಪ್ರದಾಯ. ಮನುಷ್ಯರನ್ನು ಅವರ ವೃತ್ತಿ ಆಧರಿಸಿ ಅಗೌರವ, ತಿರಸ್ಕಾರ ಭಾವನೆಯಿಂದ ಕಾಣುವುದು ಮಾನವೀಯತೆ ಅಲ್ಲ. ಯಾವುದೇ ವೃತ್ತಿಯನ್ನು ಮೇಲು-ಕೀಳು ಎನ್ನದೆ ಅದರಲ್ಲಿ ದೇವರನ್ನು ಕಾಣಬೇಕು. ಜಾತಿ ವ್ಯವಸ್ಥೆಯಿಂದ ಹೊರಬಂದು ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ನಮ್ಮದಾಗಬೇಕು. ಕಾಲಕ್ಕೆ ತಕ್ಕಂತೆ ವೃತ್ತಿ ವ್ಯವಸ್ಥೆಯಲ್ಲಿ ಬದಲಾದರೂ ಸಹಿತ ಜಾತಿ ವ್ಯವಸ್ಥೆಯ ಬಗೆಗಿನ ಕೀಳರಿಮೆ, ತಾತ್ಸಾರ ದೂರವಾಗದಿರುವುದು ವಿಷಾದದ ಸಂಗತಿಯಾಗಿದೆ  ಎಂದು ಹೇಳಿದರು.

ಕೇವಲ ಕಾನೂನು, ಸರ್ಕಾರದಿಂದ ಸಮಾಜದಲ್ಲಿನ ಮೂಡನಂಬಿಕೆ, ಅಂಧಾಚರಣೆ ಮತ್ತು ಅಸ್ಪೃಶ್ಯತೆಯ ಹೋಗಲಾಡಿಸಲು ಸಾಧ್ಯವಿಲ್ಲ. ಕಾರಣ ಸರ್ಕಾರ ಜನರ ಹತ್ತಿರಕ್ಕೆ ಬಂದು ಅವರ ಮನೋಭಾವ ಬದಲಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ ಅನೇಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸ್ವತಃ ಕಲಾವಿದರಾದ ಶಾಸಕರು ‘ಕಟ್ಟತೇವ ನಾವು ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ’ ಮತ್ತು ‘ಮಾನವರಾಗೋಣ’ ಎಂಬ ಸಾಂದರ್ಭಿಕ ಹಾಡುಗ ಳನ್ನು ಹಾಡುವ ಮೂಲಕ ನೆರೆದಿದ್ದ ಜನರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಮುತ್ತುರಾಜ್‌ ಕಲಾ ತಂಡದ ಕಲಾವಿದರು ಅಸ್ಪೃಶ್ಯತೆ ಬಗ್ಗೆ ಪ್ರದರ್ಶನ ಮಾಡಿದ ಬೀದಿ ನಾಟಕಗಳು, ಜಾನಪದ ಶೈಲಿಯ ಹಾಡುಗಳು ಗ್ರಾಮಸ್ಥರಲ್ಲಿ ಹಾಸ್ಯದೊಂದಿಗೆ ಜಾಗೃತಿ ಮೂಡಿಸಿ ದವು. ಈ ಕಲಾವಿದರು ಪ್ರದರ್ಶನ ಮಾಡಿದ ಜಾತಿ ಭೂತ ಏಕಾಂಕ ನಾಟಕ ಮತ್ತು ಊರ ಗೌಡರ ದರ್ಬಾರ ನಾಟಕಗಳು ನಿಜಕ್ಕೂ ಹಳ್ಳಿ ಬದುಕನ್ನು ತೆರೆದಿಟ್ಟಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್‌.ಬಿ. ಹರ್ತಿ, ವಸತಿ ನಿಲಯದ ಮೇಲ್ವಿಚಾರಕ ಅರಳಹಳ್ಳಿ, ಸತೀಶಗೌಡ ಪಾಟೀಲ, ಶೇಕಣ್ಣ ಕರೆಣ್ಣವರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಾಮಕ್ಕ ಮಸೂತಿ, ಹಸನ್‌ಸಾಬ್‌ ಬಾವಿಕಟ್ಟಿ, ಶಿವಣ್ಣ ಸಾಲ್ಮನಿ, ಉಮೇಶ ಬಾರಕೇರ, ಮುತ್ತಣ್ಣ ಚೋಟಗಲ್‌ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.