ADVERTISEMENT

ಇವರ ಬದುಕಿಗೆ ಕಲೆಯೇ ಆಸರೆ...!

ಶಿಗ್ಲಿಯಲ್ಲೊಬ್ಬ ಭರವಸೆಯ ಯುವ ಕಲಾವಿದ

ನಾಗರಾಜ ಎಸ್‌.ಹಣಗಿ
Published 3 ಜನವರಿ 2017, 10:41 IST
Last Updated 3 ಜನವರಿ 2017, 10:41 IST

ಲಕ್ಷ್ಮೇಶ್ವರ: ಕಲೆ ಎಲ್ಲರಿಗೂ ಒಲಿಯವು ದಿಲ್ಲ. ಅದನ್ನು ಒಲಿಸಿಕೊಳ್ಳಲು ನಿರಂತರ ಸಾಧನೆ ಅಗತ್ಯ. ಹೀಗೆ ಸತತ ಪ್ರಯತ್ನ ದಿಂದ ಕಲೆಯನ್ನು ಒಲಿಸಿಕೊಂಡು ಅದ ರಲ್ಲೆ ಬದುಕನ್ನು ಕಟ್ಟಿಕೊಂಡಿರುವ ಯುವಕ ಇಲ್ಲಿಗೆ ಸಮೀಪದ ಚಂದ್ರಾ ಚಾರಿ ಅನಂತಾಚಾರಿ ಪತ್ತಾರ ಆಗಿದ್ದಾರೆ.

ಮೂಲತಃ ಕಲಾವಿದರ ಕುಟುಂಬ ದಿಂದ ಬಂದಿರುವ  ಯುವಕ ಚಂದ್ರಾ ಚಾರಿ ಬಾಲ್ಯದಲ್ಲಿಯೇ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದ ಎಂದು ಅವರ ಸಹೋದರ ಶ್ರೀಕಾಂತ ಪತ್ತಾರ ನೆನೆಯುತ್ತಾರೆ.

ಈ ಯುವಕ ಓದಿದ್ದು ಬಿ.ಎಸ್‌ಸಿ. ಆದರೆ ನಂತರದ ದಿನಗಳಲ್ಲಿ ಕುಟುಂಬ ದಿಂದ ಬಳುವಳಿಯಾಗಿ ಬಂದ ಕಲೆ ಕ್ಷೇತ್ರದಲ್ಲಿಯೇ ಏನಾದರೂ ಸಾಧಿಸ ಬೇಕು ಎಂದು ಕನಸು ಕಂಡರು.

ಕಂಡ ಕನಸನ್ನು ನನಸು ಮಾಡಿ ಕೊಳ್ಳುವ ಸಲುವಾಗಿ ದೂರದ ಕಾರ್ಕಳಕ್ಕೆ ತೆರಳಿದರು. ಅಲ್ಲಿನ ಸಿ.ಇ. ಕಾಮತ ಕರಕುಶಲ ತರಬೇತಿ ಕೇಂದ್ರದಲ್ಲಿ ಗುಣವಂತೇಶ್ವರ ಭಟ್‌, ನಾಗೇಶಾಚಾರಿ ಹಾಗೂ ಹರೀಶ ನಾಯ್ಕ ಅವರಿಂದ ಕಲೆ ಕುರಿತು ಹೆಚ್ಚಿನ ಅಭ್ಯಾಸ ನಡೆಸಿದರು. ಎರಡು ವರ್ಷಗಳ ಕಾಲ ಕಲೆಯನ್ನೇ ಉಸಿರಾಡಿದ್ದರಿಂದ ಕಲಾದೇವಿ ಇವರಿಗೆ ಒಲಿದಳು. ಕಾರ್ಕಳದಲ್ಲಿ ತೇರನ್ನು ತಯಾ ರಿಸುವುದು, ಕಲ್ಲು ಹಾಗೂ ಕಟ್ಟಿಗೆಯಲ್ಲಿ ಮೂರ್ತಿ ತಯಾರಿಕೆ ಬಗ್ಗೆ ಹೆಚ್ಚಿನ ಅನುಭವ ಗಳಿಸಿದರು.

ಮುಂದೆ ಊರಿಗೆ ಬಂದ ನಂತರ ಅತ್ಯಂತ ಕ್ಲಿಷ್ಟಕರವಾದ ತೇರು ತಯಾರಿಕೆ ಯಲ್ಲಿ ನಿರತರಾದರು. ಮೊದಲು ಇವರು ತಯಾರಿಸಿದ್ದು ತಮ್ಮದೇ ಗ್ರಾಮ ಶಿಗ್ಲಿಯ ಬಸವಣ್ಣ ದೇವರ ರಥವಾಗಿದೆ. ತಮ್ಮ ಅನುಭವವನ್ನೆಲ್ಲ ಧಾರೆಯರೆದು ಸಿದ್ಧಪಡಿಸಿದ ಪ್ರಥಮ ತೇರು ಎಲ್ಲರ ಗಮನ ಸೆಳೆಯಿತು.

ನಂತರ ಇವರು ತಿರುಗಿ ನೋಡಿಲ್ಲ. ಇದೀಗ ₹ 18 ಲಕ್ಷ ವೆಚ್ಚದಲ್ಲಿ ಹೊಸರಿತ್ತಿ ಹತ್ತಿರದ ಕೆಸರಳ್ಳಿ ಗ್ರಾಮದ ಕಲ್ಮೇಶ್ವರ ದೇವರ ರಥವನ್ನು ಸಿದ್ಧ ಪಡಿಸುತ್ತಿದ್ದಾರೆ. ಇದಕ್ಕಾಗಿ ಇವರೂ ಸೇರಿದಂತೆ ಹೊನ್ನಾವರದ ಪ್ರಕಾಶಾಚಾರಿ, ನಾರಾಯಣಪ್ಪ ದೇವಿ ಹೊಸೂರು, ರವಿ ಪತ್ತಾರ ಈ  ಕುಶಲ ಕಲಾವಿದರು ದುಡಿಯುತ್ತಿದ್ದಾರೆ.

‘ನಾನು ಮಾಡುತ್ತಿರುವ ಕೆಲಸದಲ್ಲಿ ಉತ್ತಮ ಭವಿಷ್ಯ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರಾದ ನಾವು ನಮ್ಮ ಕಲೆಯನ್ನು ಉಳಿಸಿ ಬೆಳೆಸಬೇಕು’ ಎಂದು  ಕನ್ನಡ ಪ್ರೇಮವನ್ನು ಮೆರೆಯುತ್ತಾರೆ.

ಈ ಯುವ ಕಲಾವಿದ ಕಲ್ಲುಗಳಲ್ಲಿ ಕೆತ್ತಿರುವ ವಿವಿಧ ಮೂರ್ತಿಗಳು ಲಕ್ಷ್ಮೇಶ್ವರ ಸೇರಿದಂತೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಹಾವೇರಿ, ಧಾರವಾಡ, ಸಾಗರ, ಶಿಶುವಿನಹಾಳ, ರೋಣ ತಾಲ್ಲೂಕಿನ ಕದಡಿಯ ದೇವಸ್ಥಾನಗಳಲ್ಲಿ ಪೂಜೆಗೊಳ್ಳುತ್ತಿವೆ.

‘ಕಲೆ ಎನ್ನುವುದು ಒಂದು ತಪಸ್ಸು. ಅದನ್ನು ಮನಸಾರೆ ಮಾಡಿದರೆ ಕಲಾದೇವಿ ನಮ್ಮ ಕೈ ಹಿಡಿದು ನಡೆಸುತ್ತಾಳೆ’ ಎಂದು ಚಂದ್ರಾಚಾರಿ ಹೇಳುವ ಮಾತಿನಲ್ಲಿ ಸತ್ಯ ಇದೆ. ಕಲೆಯಲ್ಲಿ ಈ ಯುವ ಕಲಾವಿದ ಇನ್ನೂ ಉತ್ತಮ ಸಾಧನೆ ಮಾಡಿ ನಾಡಿನ ಕೀರ್ತಿ ಹೆಚ್ಚಿಸಲಿ ಎಂದು   ಆಶಿಸೋಣ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.