ADVERTISEMENT

ಎಸ್‌ಎಸ್‌ಎಲ್‌ಸಿ: ಹೊಸ ದಾಖಲೆ ಬರೆವ ಹುಮ್ಮಸ್ಸು

ಮಾರ್ಚ್‌ 23ರಿಂದ ಏಪ್ರಿಲ್‌ 6ರವರೆಗೆ ಪರೀಕ್ಷೆ; ಅಂತಿಮ ಹಂತದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 10:52 IST
Last Updated 19 ಮಾರ್ಚ್ 2018, 10:52 IST

ಗದಗ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾರ್ಚ್‌ 23ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದ್ದು, ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ ಗಮನಾರ್ಹ ಏರಿಕೆ ದಾಖಲಿಸುವ ವಿಶ್ವಾಸವನ್ನು ಜಿಲ್ಲೆ ಹೊಂದಿದೆ.

ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ದಟ್ಟವಾಗಿದ್ದ ಸಂದರ್ಭದಲ್ಲೇ ಅಂದರೆ, ಕಳೆದ ಬಾರಿ ಶೇ 75.62ರಷ್ಟು ಫಲಿತಾಂಶ ದಾಖಲಿಸಿ ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಬರೋಬ್ಬರಿ 20 ಸ್ಥಾನಗಳನ್ನು ಮೇಲೇರಿ 13ನೇ ಸ್ಥಾನ ಅಲಂಕರಿಸಿತ್ತು.

ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಮಂಡ್ಯ, ಹಾಸನ, ತುಮಕೂರು ಜಿಲ್ಲೆಗಳನ್ನು ಹಿಂದಿಕ್ಕಿ, ಹೊಸ ಮೈಲಿಗಲ್ಲು ನಿರ್ಮಿಸಿತ್ತು. ಈ ಬಾರಿ ಈ ಸ್ಥಾನದಿಂದ ಇನ್ನೊಂದು ಸ್ಥಾನ ಮೇಲೇರಿದರೂ ಅದು ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಹೊಸ ದಾಖಲೆಯಾಗಲಿದೆ.

ADVERTISEMENT

ಈ ಬಾರಿ ನಿಯಮಿತ, ಪುನರಾವರ್ತಿತ, ಬಾಹ್ಯ ವಿದ್ಯಾರ್ಥಿಗಳು ಸೇರಿ ಜಿಲ್ಲೆಯ 284 ಪ್ರೌಢಶಾಲೆಗಳ ಒಟ್ಟು 15,146 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಮುಂಡರಗಿ ತಾಲ್ಲೂಕಿನ ಕದಾಂಪುರ ಪರೀಕ್ಷಾ ಕೇಂದ್ರ ಈ ಬಾರಿ ಹೊಸದಾಗಿ ಸೇರ್ಪಡೆಯಾಗಿದ್ದು, ಒಟ್ಟು 54 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಗದಗ ನಗರ, ಗದಗ ಗ್ರಾಮೀಣ, ಮುಂಡರಗಿ, ನರಗುಂದ, ರೋಣ, ಶಿರಹಟ್ಟಿ ಸೇರಿ 6 ಶೈಕ್ಷಣಿಕ ವಲಯಗಳಿವೆ.

ಇದರಲ್ಲಿ ಗದಗ ನಗರದಲ್ಲೇ 13 ಪರೀಕ್ಷಾ ಕೇಂದ್ರಗಳಿದ್ದು, ಇಲ್ಲಿ 2843 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನರಗುಂದದಲ್ಲಿ ಅತಿ ಕಡಿಮೆ ಅಂದರೆ 06 ಪರೀಕ್ಷಾ ಕೇಂದ್ರಗಳಿದ್ದು, 31 ಶಾಲೆಗಳ 1402 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

‘ಕಳೆದ ಬಾರಿ ನಮ್ಮ ನಿರೀಕ್ಷೆ ಮೀರಿ ಫಲಿತಾಂಶ ಬಂದಿತ್ತು. ಫಲಿತಾಂಶ ಸುಧಾರಿಸಲು ಪ್ರಾರಂಭಿಸಲಾಗಿದ್ದ ಶಾಲೆ ದತ್ತು ಯೋಜನೆ ಮತ್ತು ರಾತ್ರಿ ಪಾಠ ಕಾರ್ಯಕ್ರಮಗಳು ಯಶಸ್ವಿಯಾಗಿದ್ದವು. ಈ ಬಾರಿಯೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಫಲಿತಾಂಶ ಪಟ್ಟಿಯಲ್ಲಿ ಏರಿಕೆಯಾಗಬಹುದು ಎಂಬ ವಿಶ್ವಾಸ ಹೊಂದಿದ್ದೇವೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ. ರುದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

2016ರಲ್ಲಿ ಶೇ 64.09ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು 33ನೇ ಸ್ಥಾನದಲ್ಲಿತ್ತು. ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಗುರುತಿಸಿ, ಅಂತಹ ಶಾಲೆಗಳನ್ನು ಅಧಿಕಾರಿಗಳಿಗೆ ದತ್ತು ನೀಡಲಾಗಿತ್ತು. ಈ ಶಾಲೆಗಳ ಫಲಿತಾಂಶ ಸುಧಾರಿಸುವ ಪೂರ್ಣ ಜವಾಬ್ದಾರಿ ಯನ್ನು ಅವರಿಗೆ ನೀಡಲಾಗಿತ್ತು. ಈ ಪ್ರಯೋಗ ಯಶಸ್ವಿಯಾಗಿತ್ತು. ಜಿಲ್ಲೆಯ 18 ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿದ್ದವು.

ಇದರಲ್ಲಿ 15 ಶಾಲೆಗಳು ಸರ್ಕಾರಿ ಶಾಲೆಗಳು ಎನ್ನುವುದು ಗಮನೀಯ ಅಂಶ.

ಈ ಬಾರಿಯೂ ಶಿಕ್ಷಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ಕಾರ್ಯಕ್ರಮ, ಗಣಿತ, ಇಂಗ್ಲಿಷ್‌ ವಿಷಯಗಳಿಗೆ ವಿಶೇಷ ಕಾರ್ಯಾಗಾರ, ಸಂವಾದ, ವಿಷಯಗಳ ಪುನರಾವರ್ತನೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗಿದೆ. ಗ್ರಾಮೀಣ ಭಾಗದ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ವಿಶ್ವಾಸ ಕಿರಣ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಅಂಶಗಳು ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಇದೆ.
***
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ಸ್ಥಾನ

2011-– ಶೇ 75.97 (27ನೇ ಸ್ಥಾನ)
2012– ಶೇ 79.49 (22ನೇ ಸ್ಥಾನ)
2013– ಶೇ 81.43 (18ನೇ ಸ್ಥಾನ)
2014– ಶೇ 85.56 (13ನೇ ಸ್ಥಾನ)
2015– ಶೇ 66.74 (ಕೊನೆಯ ಸ್ಥಾನ)
2016 ಶೇ 64.09 (33ನೇ ಸ್ಥಾನ)
2017 ಶೇ 75.62 (13ನೇ ಸ್ಥಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.