ADVERTISEMENT

ಕಡಕ್‌ ರೊಟ್ಟಿ, ಕರಿಂಡಿ ಜಾತ್ರೆ ಸಂಭ್ರಮ

ಹೂವಿನಶಿಗ್ಲಿಯಲ್ಲಿ ಮಕರ ಸಂಕ್ರಾಂತಿಯಂದು ಮಹೋತ್ಸವ; ಭರದ ಸಿದ್ಧತೆ

ನಾಗರಾಜ ಎಸ್‌.ಹಣಗಿ
Published 13 ಜನವರಿ 2017, 6:07 IST
Last Updated 13 ಜನವರಿ 2017, 6:07 IST
ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಹೂವಿಶಿಗ್ಲಿ ವಿರಕ್ತಮಠದ ಜಾತ್ರೆ ಕಡಕ್‌ ರೊಟ್ಟಿ ಮತ್ತು ಕರಿಂಡಿ ಜಾತ್ರೆ ಎಂದೇ ಪ್ರಸಿದ್ಧ. ಪ್ರತಿ ಸಂಕ್ರಾಂತಿಯಂದು ಜರುಗುವ ಜಾತ್ರಾ ಮಹೋತ್ಸವಕ್ಕೆ ಬರುವ ಸಾವಿರಾರು ಭಕ್ತರು ಪ್ರಸಾದ ರೂಪದಲ್ಲಿ ಕಡಕ್‌ ರೊಟ್ಟಿ ಮತ್ತು ಕರಿಂಡಿ ಸವಿಯುವುದು ಈ ಜಾತ್ರೆಯ ವಿಶೇಷ. ಧಾರ್ಮಿಕ, ಆಧ್ಯಾ ತ್ಮಿಕ ಸೇವೆಯೊಂದಿಗೆ ಶಿಕ್ಷಣ ರಂಗದಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿರುವ ಹೂವಿನ ಶಿಗ್ಲಿ ವಿರಕ್ತಮಠದ ಸೇವೆ ಎಂದೆಂದಿಗೂ ಅವಿಸ್ಮರಣೀಯ. 
 
ಸಂಕ್ಷಿಪ್ತ ಇತಿಹಾಸ: ಲಿಂ.ನಿರಂಜನ ಸ್ವಾಮೀಜಿ ಹೂವಿನಶಿಗ್ಲಿ ವಿರಕ್ತಮಠ ಕಟ್ಟಿ ಬೆಳೆಸಿದ ಮಹಾಮಹಿಮರು. ಇವರು ಇಲ್ಲಿಗೆ ಬರುವ ಮೊದಲು ಇದೊಂದು ಕಲ್ಲು, ಮುಳ್ಳುಗಳಿಂದ ಕೂಡಿದ ಹಾಳು ಮಂಟಪವಾಗಿತ್ತು. ಪೂಜೆ, ಪುನಸ್ಕಾರ ಗಳು ಕಾಣದೆ ಕೇವಲ ಎರಡು ಅಂಕಣದ ಜೀರ್ಣಾವಸ್ಥೆ ದೇವಸ್ಥಾನ ಇದ್ದ ಈ ಮಠ ಅಕ್ಷರಶಃ ಕಾಡಾಗಿತ್ತು. ಸಮಾಜ ಸೇವೆ, ಭಕ್ತರ ಉದ್ಧಾರದ ಮಹತ್ವದ ವಿಚಾರ ಹೊತ್ತು ಇಲ್ಲಿಗೆ ಬಂದಿದ್ದ ನಿರಂಜನ ಸ್ವಾಮೀಜಿ ತಮ್ಮ ಸಂಕಲ್ಪ ಶಕ್ತಿ, ಸತತ ಪರಿ ಶ್ರಮ ಹಾಗೂ ಅಪಾರ ತಪಸ್ಸಿನ ಬಲ ದಿಂದ ಕಾಡಿನಂತಿದ್ದ ಮಠವನ್ನು ಪಾವನ ಗೊಳಿಸಿದರು. ಇಂದು ಈ ಮಠ ಭಕ್ತರ ಪಾಲಿಗೆ ಶ್ರದ್ಧಾ ಕೇಂದ್ರವಾಗಿದೆ. ಇದಕ್ಕೆ ನಿರಂಜನ ಶ್ರೀಗಳ ಪರಿಶ್ರಮ ಕಾರಣ.  
 
ತಮ್ಮ ಸತ್ಯ, ಶುದ್ಧ ಕಾಯಕದಿಂದ ಮಠವನ್ನು ಮಾತ್ರ ಉದ್ಧಾರ ಮಾಡದೆ ಅದರೊಂದಿಗೆ ವಸತಿಯುತ ಶಾಲೆ ಆರಂಭಿಸಿ ನಾಡಿನ ನೂರಾರು ಬಡ ಹಾಗೂ ಅನಾಥ ಮಕ್ಕಳಿಗೆ ವಿದ್ಯೆ ದಯ ಪಾಲಿಸಿದ ದೇವರು ಎನ್ನಿಸಿಕೊಂಡಿದ್ದಾರೆ. ಗುರುಕುಲ ಮಾದರಿಯಲ್ಲಿ ವಸತಿಯುತ ಶಿಕ್ಷಣವನ್ನು ಪ್ರಾರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಎಲ್‌ಕೆಜಿಯಿಂದ ಪ್ರೌಢ ಶಿಕ್ಷಣ ದವರೆಗೆ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ಸು ಸಾಧಿಸಿದೆ.
 
ಹಾಳು ದೇವಾಲಯವಾಗಿದ್ದ ಮಠ ವನ್ನು ಅಭಿವೃದ್ಧಿ ಪಡಿಸಿ ಪವಿತ್ರ ಕ್ಷೇತ್ರ ವನ್ನಾಗಿ ಮಾಡಿದ ನಿರಂಜನ ಸ್ವಾಮೀಜಿ 7 ವರ್ಷಗಳ ಹಿಂದೆ ಲಿಂಗೈಕ್ಯರಾದರು. 
ಅವರ ನಂತರ ಇದೀಗ ಮಠಾಧ್ಯಕ್ಷ ರಾಗಿರುವ ಚೆನ್ನವೀರ ಸ್ವಾಮೀಜಿ ಹಿಂದಿನ ಸ್ವಾಮೀಜಿಯವರಂತೆ ಮಠವನ್ನು ಮುನ್ನ ಡೆಸಿಕೊಂಡು ಹೊರಟಿದ್ದಾರೆ. ಚನ್ನವೀರ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಮಠ ಈಗ ಮತ್ತಷ್ಟು ಅಭಿವೃದ್ದಿಯಲ್ಲಿ ಸಾಗಿದ್ದು ಲಿಂ.ಸ್ವಾಮಿಗಳ ಆಸೆಯಂತೆ ಸಾಂಪ್ರದಾಯಿಕವಾಗಿ ಎಲ್ಲ ಕಾರ್ಯ ಕ್ರಮಗಳು ನಡೆಯುತ್ತಿವೆ. 
 
ಜಾತ್ರೆಗೆ ಆಗಮಿಸುವ ಸಾವಿರಾರು ಭಕ್ತರಿಗೆ ಕಡಕ್‌ ರೊಟ್ಟಿ ಮತ್ತು ಕರಿಂಡಿ ನೀಡುವುದು ಸಂಪ್ರದಾಯ. ಹೀಗಾಗಿ, ಈ ಜಾತ್ರೆ ‘ಕಡಕ ರೊಟ್ಟಿ ಕರಿಂಡಿ ಜಾತ್ರೆ’ ಎಂದೇ ಪ್ರಸಿದ್ಧವಾಗಿದೆ. 
 
***
ಜಾತ್ರೆ ಇಂದಿನಿಂದ; ಹಲವು ಕಾರ್ಯಕ್ರಮ
ಲಕ್ಷ್ಮೇಶ್ವರ: ಇಲ್ಲಿಗೆ ಸಮೀಪದ ಹೂವಿನ ಶಿಗ್ಲಿ ವಿರಕ್ತಮಠದ 38ನೇ ಜಾತ್ರಾ ಮಹೋತ್ಸವ, ಮುಂಡರಗಿ ಸಂಸ್ಥಾನಮಠದ ಡಾ.ಅನ್ನದಾನೀಶ್ವರ ಸ್ವಾಮೀಜಿಯವರ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ ಜ.13ರಿಂದ 16ರವರೆಗೆ ನಡೆಯಲಿವೆ.
 
ಜ.13ರಂದು ಬೆಳಿಗ್ಗೆ7ಕ್ಕೆ ಲಿಂಗದೀಕ್ಷೆ ಮತ್ತು ಅಯ್ಯಾಚಾರ ನಡೆಯುವುದು. 9ಕ್ಕೆ ಸವಣೂರಿನ ಕಲ್ಮಠದ ಮಹಾಂತ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡುವರು. 
 
ಜಾತ್ರೆಯ ಅಂಗವಾಗಿ ಹಲವು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಲವು ಶ್ರೀಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಠಾಧೀಶ ಚೆನ್ನವೀರ ಸ್ವಾಮೀಜಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.