ADVERTISEMENT

ಕೊಟ್ಟೂರೇಶ್ವರ ದೇವರ ಪಟ್ಟಾಧಿಕಾರ ಮಹೋತ್ಸವ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 7:24 IST
Last Updated 29 ಏಪ್ರಿಲ್ 2017, 7:24 IST

ಗದಗ: ತಾಲ್ಲೂಕಿನ ಹರ್ಲಾಪೂರ ಗ್ರಾಮದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ ಏ.29ರಿಂದ ಮೇ 1 ರವರೆಗೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಜಿ.ಎಸ್.ಪಾಟೀಲ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 1ರಂದು ಬೆಳಿಗ್ಗೆ 5ಕ್ಕೆ ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಚಿನ್ಮಯಾನುಗ್ರಹ ದೀಕ್ಷೆ ನೀಡಿ, ಕೊಟ್ಟೂರೇಶ್ವರ ದೇಶಿಕರೆಂದು ನಾಮಕರಣ ಮಾಡುವರು. ನಂತರ ಷಟಸ್ಥಲ ಬ್ರಹ್ಮೋಪದೇಶ ಕರುಣಿಸಿ ಅಭಿನವ ಕೊಟ್ಟೂರೇಶ್ವರ ಸ್ವಾಮೀಜಿ, ಗುರು ಕೊಟ್ಟೂರೇಶ್ವರ ಸ್ವಾಮೀಜಿ ಅಭಿದಾನ ನೀಡಲಿದ್ದಾರೆ. ಘೋಡಗೇರಿ ವಿರಕ್ತಮಠದ ಕಾಶೀನಾಥ ಸ್ವಾಮೀಜಿ ವೈದಿಕತ್ವ ಪಠಿಸುವರು. ರಾಮದುರ್ಗಾ ಶಾಂತವೀರ ಸ್ವಾಮೀಜಿ, ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀಜಿ, ಅಮರಸಿದ್ದೇಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಮಹಾಂತ ಸ್ವಾಮೀಜಿ, ಸಂಪದನ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಬೆಳಿಗ್ಗೆ 10ಕ್ಕೆ ನೀಲಕಂಠ ಸ್ವಾಮೀಜಿಯಿಂದ ಕೊಟ್ಟೂರೇಶ್ವರ ಸ್ವಾಮೀಜಿ ಶೂನ್ಯ ಸಿಂಹಾಸನಾರೋಹಣ ಅಲಂಕರಿಸುವರು. ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಸುವರ್ಣಗಿರಿಯ ಮಠದ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 12ಕ್ಕೆ ಕೊಟ್ಟೂರೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, 1,001 ಮುತ್ತೈದೆಯರಿಂದ ಪೂರ್ಣ ಕುಂಭ ಮೆರವಣಿಗೆ ನಡೆಯಲಿದೆ.

ADVERTISEMENT

ಏ.29 ರಂದು ಬೆಳಿಗ್ಗೆ ಲಕ್ಕುಂಡಿ ಅಲ್ಲಮಪ್ರಭುದೇವರ ಮಠದ ಸಿದ್ದಲಿಂಗ ಶ್ರೀಗಳು ಷಟ್‌ಸ್ಥಲ ಧ್ವಜಾರೋಹಣ, ಸಂಜೆ 6ಕ್ಕೆ ಪುರಾಣ ಮಂಗಲ, ಹಾನಗಲ್ಲ ಕುಮಾರೇಶ್ವರ 150ನೇ ಜಯಂತಿ ಹಾಗೂ ಪಟ್ಟಾಧಿಕಾರ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.