ADVERTISEMENT

ಗೋವಿನಜೋಳ ಬೆಲೆ ಕುಸಿತ: ಆತಂಕ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 6:55 IST
Last Updated 10 ನವೆಂಬರ್ 2017, 6:55 IST
ಗಜೇಂದ್ರಗಡ ಕೃಷಿ ಉತ್ಪನ್ನ ಮಾರಾಟಕ್ಕೆ ರೈತರು ತಂದ ಗೋವಿನ ಜೋಳದ ಚೀಲಗಳು
ಗಜೇಂದ್ರಗಡ ಕೃಷಿ ಉತ್ಪನ್ನ ಮಾರಾಟಕ್ಕೆ ರೈತರು ತಂದ ಗೋವಿನ ಜೋಳದ ಚೀಲಗಳು   

ಗಜೇಂದ್ರಗಡ: ಬಹಳಷ್ಟು ರೈತರು ಕಡಿಮೆ ಖರ್ಚಿನ ಬೆಳೆ ಎಂದು ಈ ಸಲ ಗೋವಿನ ಜೋಳವನ್ನೇ ಹೆಚ್ಚು ಬೆಳೆದಿದ್ದು, ಈಗ ಗೋವಿನ ಜೋಳದ ಬೆಲೆ ಕುಸಿತವಾಗಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.

ಈ ಭಾಗದ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಗೋವಿನಜೋಳ ಬೆಳೆದಿದ್ದಾರೆ. ನಿತ್ಯ ಎ.ಪಿ.ಎಂ.ಸಿ.ಗೆ ಗೋವಿನಜೋಳ ಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ದಲಾಲಿ ಅಂಗಡಿ ಮುಂದೆ ಎತ್ತರವಾಗಿ ಪೇರಿಸಿಟ್ಟ ಗೋವಿನಜೋಳದ ಚೀಲಗಳೇ ಕಾಣಿಸುತ್ತವೆ.

ಸುತ್ತಲಿನ ಗ್ರಾಮಗಳಿಂದಲ್ಲದೇ ಕುಷ್ಟಗಿ, ಹುನಗುಂದ ತಾಲ್ಲೂಕುಗಳಿಂದ ಕೂಡ ಪ್ರತಿದಿನ ಸುಮಾರು 8ರಿಂದ 10 ಸಾವಿರ ಚೀಲ ಗೋವಿನಜೋಳವೇ ಬರುತ್ತಿದೆ. ಒಂದು ತಿಂಗಳ ಹಿಂದೆ ಕ್ವಿಂಟಲ್‌ಗೆ ₹ 1300ರಿಂದ ₹ 1400ರಷ್ಟಿದ್ದ ದರ ಈಗ ₹ 1125ಕ್ಕೆ ಕುಸಿದಿದೆ.

ADVERTISEMENT

ಈಗಿರುವ ದರದ ಪ್ರಕಾರ ಗೋವಿನಜೋಳ ಬೆಳೆಯಲು ಮಾಡಿದ ಖರ್ಚು ಕೂಡ ಗಿಟ್ಟುವುದಿಲ್ಲ ಎಂದು ರೈತ ಶರಣಪ್ಪ ವಾರಿಕಲ್ ಅಳಲು ತೋಡಿಕೊಂಡರು. ‘ಈ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ಬರಬೇಕು. ಗೋವಿನಜೋಳಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ಸ್ಥಾಪಿಸಬೇಕು’ ಎಂದು ಎ.ಪಿ.ಎಂ.ಸಿ ವರ್ತಕರಾದ ಈಶಪ್ಪ ಮ್ಯಾಗೇರಿ ಹೇಳಿದರು.

‘ಪ್ರತಿವರ್ಷ ಗೋವಿನಜೋಳ ಬೇರೆ ದೇಶಗಳಿಗೆ ರಫ್ತಾಗುತ್ತಿತ್ತು. ಈಗ ರಫ್ತಿಗೆ ತಡೆ ಒಡ್ಡಲಾಗಿದೆ. ಇದರಿಂದ ದರ ಏರಿಕೆಯಾಗಿಲ್ಲ. ಈ ಸಮಸ್ಯೆ ಎದುರಿಸಲು ರೈತರು ತಮ್ಮ ಬೆಳೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕೃಷಿ ತಜ್ಞರ, ವಿಜ್ಞಾನಿಗಳ ಸಲಹೆ ಪಡೆದು ಬೇರೆ ಬೇರೆ ಬೆಳೆ ಬೆಳೆಯಬೇಕು’ ಎಂದು ವರ್ತಕ ಚನ್ನಬಸಪ್ಪ ವಾಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.