ADVERTISEMENT

‘ಗ್ರಾಹಕ ರಕ್ಷಣೆ; ತಿಳಿವಳಿಕೆ ಅಗತ್ಯ’

ಗ್ರಾಹಕರ ದಿನಾಚರಣೆ ಕಾರ್ಯಕ್ರಮ; ಜಿಲ್ಲಾಧಿಕಾರಿ ಮನೋಜ್ ಜೈನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 10:19 IST
Last Updated 22 ಮಾರ್ಚ್ 2018, 10:19 IST

ಗದಗ: ‘ದೈನಂದಿನ ಜೀವನದಲ್ಲಿ ವಿವಿಧ ವಸ್ತುಗಳ ಖರೀದಿ ಹಾಗೂ ಸೇವೆ ಪಡೆಯುವ ನಾವೆಲ್ಲರೂ ಗ್ರಾಹಕರ ರಕ್ಷಣಾ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ’ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.

ಜಿಲ್ಲಾಡಳಿತದಿಂದ ಇಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಇಂದು ಸರಕು ಮತ್ತು ಸೇವೆಗೆ ಡಿಜಿಟಲ್‌ ಸ್ಪರ್ಶ ಲಭಿಸಿದ್ದು, ಮಾರುಕಟ್ಟೆ ವ್ಯವಸ್ಥೆಯಲ್ಲಿ ತುಂಬ ಬದಲಾವಣೆಗಳಾಗಿವೆ. ವಸ್ತುಗಳ ಗುಣಮಟ್ಟ, ಪ್ರಮಾಣ, ದರದ
ವಿಚಾರದಲ್ಲಿ ಗ್ರಾಹಕರು ಜಾಗೃತರಾಗಬೇಕು. ಅನ್ಯಾಯವಾದರೆ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಬಹುದು’ ಎಂದರು.

ನ್ಯಾಯಾಧೀಶರಾದ ರೇಣುಕಾ ಕುಲಕರ್ಣಿ ಮಾತನಾಡಿ, ‘ಆನ್‌ಲೈನ್ ಮೂಲಕ ಖರೀದಿ ಮಾಡುವಾಗ ಗ್ರಾಹಕರು ಹೆಚ್ಚಿನ ಜಾಗೃತಿ ವಹಿಸಬೇಕು. ಖರೀದಿಸುವ ವಸ್ತುವಿನ ನಿಖರ ಮಾಹಿತಿ ಪಡೆಯುವ ಮತ್ತು ಖರೀದಿಯ ಬಗ್ಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. ಅನಾಮಧೇಯ ಕರೆಗಳು, ಇಮೇಲ್‌ ಬಂದಾಗ ವೈಯಕ್ತಿಕ ವಿವರ ನೀಡಬಾರದು. ಆನ್‌ಲೈನ್‌ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ADVERTISEMENT

ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್.ಪಲ್ಲೇದ, ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ಎಂಜಿನಿಯರ್‌ ಪಿ.ಸಿ.ಅರ್ಜುಣಗಿ, ಜಿಲ್ಲಾ ಪಂಚಾಯಿತಿ ಸಿಇಒ ಮಂಜುನಾಥ ಚವ್ಹಾಣ, ಜಿಲ್ಲಾ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಿ.ಎಸ್.ಅಂಗಡಿ,
ಡಾ.ರಾಜೇಂದ್ರ ಮಾತನಾಡಿದರು.

ಮತದಾನ ಜಾಗೃತಿ ಪ್ರತಿಜ್ಞಾ ವಿಧಿಬೋಧಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಅಕ್ಕಮಹಾದೇವಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಅಶೋಕ ಕಲಘಟಗಿ, ಮಕ್ಕಳ ರಕ್ಷಣಾ ಘಟಕದ ಮಲ್ಲಪ್ಪ ಹೊಸಳ್ಳಿ, ಪ್ರಭಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.