ADVERTISEMENT

ಜಾತೀಯತೆ ತೊಲಗಿದರೆ ದೇಶ ಬಲಿಷ್ಠ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 8:40 IST
Last Updated 20 ಏಪ್ರಿಲ್ 2017, 8:40 IST

ಗದಗ: ಅಂಬೇಡ್ಕರ್‌ ಅವರು ಬಾಲ್ಯದಿಂದಲೇ ಸಾಮಾಜಿಕ ಅಸಮಾನತೆ, ಅನ್ಯಾಯ, ಅವಮಾನಗಳಿಂದ ಖಿನ್ನರಾಗದೇ ಎಲ್ಲ ಕ್ಷೇತ್ರಗಳಲ್ಲೂ ಅಪಾರ ಜ್ಞಾನ ಗಳಿಸಿದ್ದರು. ಎಲ್ಲ ವಿಷಯವನ್ನೂ ಕೂಲಂಕಷವಾಗಿ ಪರಿಶೀಲಿಸಿ ಸಾಮಾಜಿಕ ಅಸಮಾನತೆ ವಿಚಾರದಲ್ಲಿ  ಆ ಕಾಲದ ನಾಯಕರ ಗಮನ ಸೆಳೆದರು ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಿಂದ ಈಚೆಗೆ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮನುಷ್ಯನ್ನು ಮನುಷ್ಯನನ್ನಾಗಿ ನೋಡದ ದೇಶ ಹಾಗೂ ಧರ್ಮದ ಬಗ್ಗೆ ಅಂಬೇಡ್ಕರ್‌ ಅವರಿಗೆ ಅಸಮಾಧಾನವಿತ್ತು. ಹೀಗಾಗಿ ಅವರು ತಮ್ಮ ಕೊನೆಗಾಲದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದು ತಿಳಿಸಿದರು.

ಜಾತೀಯತೆ ತೊಲಗಿ, ಸಹೋದರತೆ ನೆಲೆಗೊಂಡರೆ ಮಾತ್ರ ಭಾರತ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಬಹುಭಾಷೆ, ಬಹುಸಂಸ್ಕೃತಿ, ಬಹುಜನವಿರುವ ದೇಶಕ್ಕೆ ಪೂರಕವಾಗಿರುವ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್‌ ನೀಡಿದ್ದಾರೆ. ಸಮಾನ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ADVERTISEMENT

ಡಾ.ಬಿ.ಆರ್. ಅಂಬೇಡ್ಕರ್‌ ಚಿಂತನೆಗಳ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಲೋಕೇಶ ಮಾತನಾಡಿದರು. ಅಂಬೇಡ್ಕರ್‌ ಅವರ ಚಿಂತನೆಗಳು ಸಾರ್ವಕಾಲಿಕ. ಅಂಬೇಡ್ಕರ್‌ ಭಾರತೀಯ ಎಲ್ಲ ಧರ್ಮ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಸಮಾನತೆ, ಸಹೋದರತೆ ಮತ್ತು ಭಾತೃತ್ವವನ್ನು ಕೆಡಿಸುವ ಬ್ರಾಹ್ಮಣ್ಯದ ವಿರುದ್ದ ಅವರಿಗೆ ಅಸಮಾನಧಾನವಿತ್ತು. ಆದರೆ, ಅವರು ಬ್ರಾಹ್ಮಣರ ವಿರೋಧಿಯಾಗಿರಲಿಲ್ಲ. ಜಾತ್ಯಾತೀತತೆ, ಮಹಿಳಾ ಸಮಾನತೆ ಕುರಿತ ಅವರ ವಿಚಾರಗಳು ಸುಭದ್ರ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿವೆ.

ಆದರೆ, ಇಂದಿಗೂ ಜಾತೀಯತೆ ಪ್ರಬಲವಾಗಿ ಬೆಳೆಯುತ್ತಿದೆ. ಇತಿಹಾಸ, ತತ್ವಶಾಸ್ತ್ರ, ಅರ್ಥವ್ಯವಸ್ಥೆ, ಸಮಾಜಶಾಸ್ತ್ರ, ಮಾನವಶಾಸ್ತ್ರ ಕುರಿತ ಅವರ ಚಿಂತನೆಗಳಿಗೆ ಆದ್ಯತೆ ನೀಡಿದೆ ಎಂದರು.ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ವಚನಗಳನ್ನು ಓದಿದರು. ಸೃಷ್ಠಿ ಬಿನ್ನಾಳ ಧರ್ಮಗ್ರಂಥ ಪಠಣ ಮಾಡಿದರು. ನಂದಾ ದಿನ್ನಿ, ಸದಾಶಿವಯ್ಯ ಮದರಿಮಠ, ಅಶೋಕ ಸಂಕಣ್ಣವರ, ರತ್ನಕ್ಕ ಪಾಟೀಲ, ವಿವೇಕಾನಂದಗೌಡ ಪಾಟೀಲ, ರಮೇಶ ಕಲ್ಲನಗೌಡ್ರ, ವಿರೂಪಾಕ್ಷಪ್ಪ ಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ. ಚೇತನ ಅಂಗಡಿ, ಸಿದ್ಧಲಿಂಗೇಶ ಲಕ್ಕುಂಡಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.