ADVERTISEMENT

ಟೈರ್‌ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:03 IST
Last Updated 24 ಮೇ 2017, 9:03 IST

ನರಗುಂದ: ಮಹಾದಾಯಿ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಮಹಾದಾಯಿ ಹೋರಾಟ ಸಮಿತಿ ಸದಸ್ಯರು ಮಂಗಳವಾರ ಧರಣಿಯ 678ನೇ ದಿನದಲ್ಲಿ ಕಪ್ಪುಛತ್ರಿ ಹಿಡಿದು ಬೃಹತ್‌ ಪ್ರತಿಭಟನೆ ನಡೆಸಿದರು. 

ಟೈರ್‌ಗೆ ಬೆಂಕಿ ಹಚ್ಚಿ, ಹುಬ್ಬಳ್ಳಿ –ವಿಜಯಪುರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಸರ್ಕಾರಗಳ ವಿರುದ್ಧ ಕಿಡಿ ಕಾರಿದರು. ಧರಣಿ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡ ರೈತರು  ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ  ಘೋಷಣೆ ಕೂಗಿದರು. ಜನಪ್ರತಿನಿಧಿಗಳ ನಿರ್ಲಕ್ಷ ಖಂಡಿಸಿದರು.

ಸಂಚಾರ ವ್ಯತ್ಯಯ: ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶಗೊಂಡಿದ್ದ ರೈತರು ಅರ್ಧ ಗಂಟೆ ಹೆದ್ದಾರಿ ತಡೆ ನಡೆಸಿದರು. ಇದರಿಂದ ಸಂಚಾರ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದರು. ಕೇಂದ್ರ ಸರ್ಕಾರ ಹಾಗೂ  ಪ್ರಧಾನಿ ನರೇಂದ್ರ ಮೋದಿ  ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ  ವೀರಬಸಪ್ಪ ಹೂಗಾರ ‘ಕಳೆದ ಒಂದೂವರೆ ವರ್ಷದಿಂದ ನಿರಂತರ  ಹೋರಾಟ  ನಡೆಸುತ್ತಿದ್ದೇವೆ. ಇದರಲ್ಲಿ ಎಲ್ಲರೂ ಬಂದು ಭಾಗವಹಿಸಿ ಭರವಸೆಗಳ ಮಳೆ ಸುರಿಸಿದ್ದಾರೆ. ಆದರೆ ಯೋಜನೆ ಮಾತ್ರ ಅನುಷ್ಠಾನಗೊಂಡಿಲ್ಲ. ರಾಜಕಾರಣಿಗಳಿಗೆ ರಾಜಕೀಯ ಸ್ವಾರ್ಥ ತುಂಬಿ ತುಳುಕಾಡುತ್ತಿದೆ. ಆದ್ದರಿಂದಲೇ ಸಂಸದರು, ಶಾಸಕರು ನಮ್ಮ  ಹೋರಾಟವನ್ನು ಮೋಜಿನಾಟದಂತೆ ಕಾಣುತ್ತಿದ್ದಾರೆ’ ಎಂದು ಕಿಡಿಕಾರಿದರು.

ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ  ವೀರೇಶ ಸೊಬರದಮಠ ಮಾತನಾಡಿ ‘ಮಲಪ್ರಭೆ ಅಚ್ಚುಕಟ್ಟು ಪ್ರದೇಶದ ರೈತರ ಬದುಕು ಹಸನಾಗಬೇಕಾದರೆ ಕೇಂದ್ರ ಸರ್ಕಾರ ಮಹಾದಾಯಿ ಅನುಷ್ಠಾನಕ್ಕೆ ಮುಂದಾಗಬೇಕು. ನ್ಯಾಯಮಂಡಲಿ ಸೂಚನೆ ಪಾಲಿಸಬೇಕು. ಆದಷ್ಟು ಬೇಗನೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು. ರೈತರ ಸೇನೆ  ಉಪಾಧ್ಯಕ್ಷ  ಶಂಕ್ರಣ್ಣ ಅಂಬಲಿ ಮಾತನಾಡಿದರು.

ಶಂಕರ ಮಣ್ಣೂರು, ಎಸ್‌.ಬಿ.ಜೋಗಣ್ಣವರ, ಶ್ರೀಶೈಲ ಮೆಟಿ,  ವೆಂಕಪ್ಪ ಹುಜರತ್ತಿ, ರಾಘವೇಂದ್ರ ಗುಜಮಾಗಡಿ, ವಾಸು ಚವ್ಹಾಣ,  ಹನಮಂತ ಪಡೆಸೂರ,  ರಮೇಶ ನಾಯ್ಕರ,  ವೀರಣ್ಣ ಸೊಪ್ಪಿನ,   ಯಲ್ಲಪ್ಪ ಗುಡದರಿ, ಕಲ್ಲಪ್ಪ ಮೊರಬದ, ಲಕ್ಷ್ಮಣ ಮುನೇನಕೊಪ್ಪ, ನಾಗರತ್ನ ಸವಳಬಾವಿ, ಸಿದ್ದವ್ವ ಕುರಿ, ಚನ್ನಬಸವ್ವ ಆಯಟ್ಟಿ, ಅನಸವ್ವ ಶಿಂಧೆ, ರಾಯವ್ವ ಕಟಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

* * 

ರೈತರ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ.  ಸಂಸದರು, ಶಾಸಕರು ನಮ್ಮ  ಹೋರಾಟವನ್ನು ಮೋಜಿನಾಟದಂತೆ ಕಾಣುತ್ತಿದ್ದಾರೆ
ವೀರಬಸಪ್ಪ ಹೂಗಾರ
ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.