ADVERTISEMENT

ತರಕಾರಿ ಬೆಲೆ ಗಗನಕ್ಕೆ; ಗ್ರಾಹಕರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:58 IST
Last Updated 19 ಮೇ 2017, 5:58 IST
ಗದುಗಿನ ಗ್ರೇನ್‌ ಮಾರುಕಟ್ಟೆಯ ದೃಶ್ಯ
ಗದುಗಿನ ಗ್ರೇನ್‌ ಮಾರುಕಟ್ಟೆಯ ದೃಶ್ಯ   

ಗದಗ: ಮುಂಗಾರು ಪೂರ್ವ ಮಳೆ ಸುರಿದರೂ ನಗರದಲ್ಲಿ ತರಕಾರಿ ಬೆಲೆ ಇಳಿದಿಲ್ಲ. ಮಳೆಕೊರತೆ, ಇಳುವರಿ ಕುಸಿತದ ನೆಪದಲ್ಲಿ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿದೆ. ಮದುವೆ ಕಾರ್ಯಗಳು ಪ್ರಾರಂಭವಾಗಿರುವುದರಿಂದ ಒಂದು ತಿಂಗಳಿನ ಹಿಂದೆ ಇದ್ದ ತರಕಾರಿ ಬೆಲೆಗಳು ಈಗ ದುಪ್ಪಟ್ಟಾಗಿವೆ.

ಮುಂಗಾರು ಪ್ರಾರಂಭವಾಗುವ ಹೊತ್ತಿಗೆ ತರಕಾರಿ ಬೆಲೆ ತುಸು ಅಗ್ಗವಾಗುವುದು ವಾಡಿಕೆ. ಆದರೆ, ಈ ಬಾರಿ ಮಾರುಕಟ್ಟೆಗೆ ಪೂರೈಕೆ ಪ್ರಮಾಣವೂ ಕಡಿಮೆಯಾಗುತ್ತಿದ್ದು, ಬೆಲೆ ಇಳಿಯುವ ಲಕ್ಷಣ ಗೋಚರಿಸುತ್ತಿಲ್ಲ.

‘ಬರ ಹೆಚ್ಚಿರುವುದರಿಂದ ಕೊಳವೆ ಬಾವಿಗಳು ಬತ್ತಿವೆ. ತುಂಗಭದ್ರಾ, ಮಲ ಪ್ರಭಾ ಕಾಲುವೆಯಲ್ಲಿ ನೀರು ಹರಿದಿಲ್ಲ. ಹೀಗಾಗಿ ಬಹುತೇಕ ರೈತರಿಗೆ ತರಕಾರಿ ಯನ್ನೂ ಬೆಳೆಯಲು ಸಾಧ್ಯವಾಗಿಲ್ಲ. ಇದರ ಪ್ರಭಾವ ಬೆಲೆ ಮೇಲೆ ತಟ್ಟಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಲ್ಲಿಕಾರ್ಜುನ.

ADVERTISEMENT

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಬಹುತೇಕ ತರಕಾರಿಗಳ ಬೆಲೆ ಸರಾಸರಿ ಶೇ 30ರಿಂದ ಶೇ 50ರಷ್ಟು ಹೆಚ್ಚಿದೆ. ಪ್ರತಿ ಕೆ.ಜಿಗೆ ₹40ರಿಂದ ₹50ರ ಆಸುಪಾಸಿನಲ್ಲಿದ್ದ ಬೆಲೆ ಈಗ ₹80ರಿಂದ ₹100ರ ಸಮೀಪಕ್ಕೆ ಬಂದಿವೆ.

ನಗರದ ಮಾರುಕಟ್ಟೆಯಲ್ಲಿ ಪಾವು ಕೆ.ಜಿ ಲೆಕ್ಕದಲ್ಲಿ (250 ಗ್ರಾಂ) ತರಕಾರಿ ಬೆಲೆ ನಿಗದಿಪಡಿಸುತ್ತಾರೆ. ಸದ್ಯ ಎಲ್ಲ ತರಕಾರಿಗಳ ಬೆಲೆಯೂ ಪಾವು ಕೆ.ಜಿಗೆ ₹20 ಇದೆ.
‘ತರಕಾರಿ ಬೆಲೆ ಕೇಳಿದರೆ ತಲೆ ತಿರುಗುತ್ತದೆ. ಅಷ್ಟರ ಮಟ್ಟಿಗೆ ಬೆಲೆ ಏರಿಕೆ ಯಾಗಿದೆ. ಕಳೆದ ಹದಿನೈದು ದಿನಗಳಿಂದ ತರಕಾರಿ ದರದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ತರಕಾರಿ ದರ ಹೆಚ್ಚಾಗುವುದು ಸಾಮಾನ್ಯ. ಆದರೆ ಈ ಬಾರಿ ಮಳೆಯ ಕೊರತೆ ಮತ್ತು ನೀರಿನ ಅಭಾವದಿಂದ ಬೆಳೆ ಕುಂಠಿತಗೊಂಡ ಪರಿಣಾಮ ವೀಪರಿತ ಬೆಲೆ ಏರಿದೆ’ ಎನ್ನುತ್ತಾರೆ ನಗರದ ಗ್ರೇನ್‌ ಮಾರುಕಟ್ಟೆಗೆ ತರಕಾರಿ ಖರೀದಿಗೆ ಬಂದಿದ್ದ ಖಾನಾವಳಿ ಯೊಂದರ ಮಾಲೀಕ ಚನ್ನಬಸಪ್ಪ.

ಕಳೆದೆರಡು ವಾರಗಳಿಂದ ಗದಗ ಬೆಟಗೇರಿ ಅವಳಿ ನಗರದ ಗ್ರೇನ್ ಮಾರುಕಟ್ಟೆಯಲ್ಲಿ ಎಲ್ಲ ತರಹದ ತರಕಾರಿಗಳು ಪ್ರತಿ ಕೆ.ಜಿ.ಗೆ ₹15ರಿಂದ ₹20 ಹೆಚ್ಚಾಗಿದೆ. ಹದಿನೈದು ದಿನಗಳ ಹಿಂದೆ ಕೆ.ಜಿಗೆ  ₹10ಕ್ಕೆ ಮಾರಾಟ ವಾಗುತ್ತಿದ್ದ ಟೊಮೆಟೊ ಬೆಲೆ ಈಗ ₹25ಕ್ಕೆ ಜಿಗಿದಿದೆ. ಬೀನ್ಸ್, ಹುರಳಿ ಕಾಯಿ, ಶುಂಠಿ, ಕ್ಯಾರೆಟ್, ದೊಡ್ಡ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಬಲು ದುಬಾರಿಯಾಗಿದೆ. ಬದನೆಕಾಯಿ, ಹಿರೇಕಾಯಿ, ಹಾಗಲಕಾಯಿ, ಸೌತೆ ಕಾಯಿ,  ಬೆಂಡೆಕಾಯಿ, ಹೂಕೋಸಿನ ಬೆಲೆ ಕೆ.ಜಿಗೆ ಸರಾಸರಿ ₹80 ಇದೆ. ಸೊಪ್ಪುಗಳ ಬೆಲೆಯೂ ದುಪ್ಪಟ್ಟಾಗಿದೆ. ಕೊತ್ತಂಬರಿ ಒಂದು ಕಟ್ಟಿಗೆ ₹8, ಪುದೀನಾ, ಸಬ್ಬಸಗಿ ₹8, ಮೆಂತೆ  ₹10 ರೂಪಾಯಿ ಹಾಗೂ ₹10ಕ್ಕೆ ಮೂರು ನುಗ್ಗೆಕಾಯಿ ಮಾರಾಟವಾಗುತ್ತಿದೆ.

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮಂಗಳೂರು ಸೌತೆ, ನವಿಲುಕೋಸು ಸೇರಿದಂತೆ ಕೆಲವು ತರಕಾರಿಗಳು ಬೆಲೆ ಏರಿಕೆಯಿಂದ ಮಾರುಕಟ್ಟೆಯಿಂದ ನಾಪತ್ತೆಯಾಗಿವೆ. ‘ತರಕಾರಿ ಬೆಲೆ ಎಷ್ಟೇ ಹೆಚ್ಚಾದರೂ ಅಡುಗೆ ಮಾಡೋದು ಬಿಡೋಕಾಗತ್ತಾ, ಅನಿವಾರ್ಯ ಕೊಂಡು ತಿನ್ನಲೇಬೇಕಲ್ಲ’ ಎಂದು ಬೆಟಗೇರಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಶಾಂತಮ್ಮ ಪ್ರತಿಕ್ರಿಯಿಸಿದರು.

**

ಮಳೆ ಇಲ್ಲದೇ ಸುತ್ತಮುತ್ತಲಿನ ಗ್ರಾಮಗಳಿಂದ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ. ಏನಿದ್ದರೂ ಬೆಳಗಾವಿಯಿಂದ ಬರಬೇಕು. ಹೀಗಾಗಿ ತರಕಾರಿ ದರ ಹೆಚ್ಚಾಗಿದೆ
-ಮಂಜುನಾಥ ಯಲಿವಾಳ, ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.