ADVERTISEMENT

ತೋಳಗಳ ದಾಳಿ: 22 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಮೇ 2017, 5:58 IST
Last Updated 15 ಮೇ 2017, 5:58 IST

ನರೇಗಲ್: ಸೆಕೆ ಎಂಬ ಕಾರಣಕ್ಕೆ ಮನೆಯ ಹೊರಗೆ ಮಲಗಿದ್ದವರ ಮೇಲೆ ಶನಿವಾರ ತಡರಾತ್ರಿ ತೋಳಗಳು ದಾಳಿ ನಡೆಸಿದ್ದು 22 ಜನರು ಗಾಯಗೊಂಡಿ ದ್ದಾರೆ. ನರೇಗಲ್ ಹೋಬಳಿಯ ಗುಜ ಮಾಗಡಿ, ಯರೆಬೇಲೇರಿ, ನಾಗರಾಳ ಮತ್ತು ಕುರುಡಗಿ ಗ್ರಾಮಗಳಲ್ಲಿ ಈ ಘಟನೆ ನಡೆದಿದೆ.

ಗಾಯಗೊಂಡವರಲ್ಲಿ ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ. ಇವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜಮಾಗಡಿಯಲ್ಲಿ 8, ಯರೇಬೇಲೆರಿಯಲ್ಲಿ 7, ಕುರುಡಗಿಯಲ್ಲಿ 5, ನಾಗರಾಳ ಇಬ್ಬರ ಮೇಲೆ ತೋಳಗಳು ದಾಳಿ ನಡೆಸಿವೆ. ತೋಳಗಳು ದಾಳಿ ನಡೆಸುತ್ತಿದ್ದಂತೆಯೇ ಹೆದರಿದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ದಾಳಿ ನಡೆಸಿರುವ ತೋಳಕ್ಕೆ ಹುಚ್ಚು ಹಿಡಿದಿದೆ ಎನ್ನಲಾಗಿದೆ. ಇದರಿಂದ ಭಯಭೀತ ಗೊಂಡಿರುವ ಜನ ತೋಳ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಗದಗ ವಲಯ ಅರಣ್ಯಾಧಿಕಾರಿಗಳು, ರೋಣ ಉಪ ವಲಯ ಅರಣ್ಯಾಧಿಕಾರಿಗಳು ಮತ್ತು ನರೇಗಲ್ ಠಾಣೆಯ ಪೊಲೀಸ್ ಸಿಬ್ಬಂದಿ ರಾತ್ರಿಯೇ ಸ್ಥಳಗಳಿಗೆ ಭೇಟಿ ನೀಡಿದ್ದರು.

ADVERTISEMENT

ಸೆರೆ: ಮೂರು ತಂಡಗಳನ್ನು ರಚನೆ ಮಾಡಿ ಸ್ಥಳೀಯರ ಮತ್ತು ಪೊಲೀಸ್ ಸಿಬ್ಬಂದಿ ಸಹಾಯದಿಂದ ಭಾನುವಾರಬೆಳಿಗ್ಗೆ 11ಗಂಟೆಗೆ ದಾಳಿ ನಡೆಸಿ ತೋಳವನ್ನು ಹಿಡಿಯಲಾಗಿದೆ.
‘ತೋಳಕ್ಕೆ ಹುಚ್ಚು ಹಿಡಿದಿದೆಯೋ, ಇಲ್ಲವೋ ಎನ್ನುವುದು ಮರಣೋತ್ತರ ಪರೀಕ್ಷೆಯ ನಂತರ ತಿಳಿಯುತ್ತದೆ’ ಎಂದು ಗದಗ ವಲಯ ಅರಣ್ಯಾಧಿಕಾರಿ ಮಹಾಂತೇಶ ಪೆಟ್ಲೂರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.