ADVERTISEMENT

ತ್ಯಾಗ, ಬಲಿದಾನಗಳ ಬಕ್ರೀದ್‌ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 5:19 IST
Last Updated 3 ಸೆಪ್ಟೆಂಬರ್ 2017, 5:19 IST

ಗದಗ: ತ್ಯಾಗ–ಬಲಿದಾನಗಳ ಮಹತ್ವ ಸಾರುವ ಬಕ್ರೀದ್ (ಈದ್-ಉಲ್-ಅಝ್ಹಾ) ಹಬ್ಬವನ್ನು ಮುಸ್ಲಿಮರು ನಗರ ದಲ್ಲಿ ಶನಿವಾರ ಶ್ರದ್ಧಾ– ಭಕ್ತಿಯಿಂದ ಆಚರಿಸಿದರು. ನಗರದ ಡಂಬಳ ನಾಕಾ, ಮುಳಗುಂದ ನಾಕಾ, ಬೆಟಗೇರಿ ಈದ್ಗಾ ಮೈದಾನದಲ್ಲಿ ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದ ವಿವಿಧ ಬಡಾವಣೆ ಯಲ್ಲಿರುವ ಮಸೀದಿಗಳಲ್ಲೂ ಪ್ರಾರ್ಥನೆ ಸಲ್ಲಿಸಲಾಯಿತು.

ಹಜ್ ಯಾತ್ರೆಯಿಂದ ಮರಳಿ ತವ ರಿಗೆ ಬಂದವರು ಪ್ರಾರ್ಥನೆಯಲ್ಲಿ ಭಾಗ ವಹಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು.  ಶ್ವೇತ ವಸ್ತ್ರಧಾರಿಗಳಾಗಿ ಅಲ್ಲಾಹ್‌ನ ನಾಮಪಠಣ ಮಾಡುವ ಮೂಲಕ  ಹಿರಿ ಯರು ಹಾಗೂ ಕಿರಿಯರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿ ಮಯ ಮಾಡಿಕೊಂಡರು.

‘ಮುಸ್ಲಿಮರು ತ್ಯಾಗ, ಬಲಿದಾನ, ಸಹೋದರತೆ, ಪ್ರೀತಿ, ವಾತ್ಸಲ್ಯ ಮತ್ತು ಏಕತೆ ಗುಣಗಳನ್ನು ಪಾಲಿಸುವುದರೊಂದಿಗೆ ಸಮಾಜದ ಪ್ರಗತಿಗೆ ಶ್ರಮಿಸ ಬೇಕು. ನಮಾಜ್, ಹಜ್, ರೋಜಾ, ಜಕಾತ್ ಹಾಗೂ ಸಿತ್ರಾ ಈ ಪಂಚ ಸೂತ್ರ ಪಾಲಿಸಿದರೆ ಅಲ್ಲಾಹ್‌ನ ಕೃಪೆಗೆ ಪಾತ್ರರಾಗಲು ಸಾಧ್ಯವಾಗುತ್ತದೆ. 

ADVERTISEMENT

ಉತ್ತಮ ಆಚಾರ, ವಿಚಾರಗಳನ್ನು ರೂಢಿಸಿಕೊಳ್ಳ ಬೇಕು’ ಎಂದು ಡಂಬಳ ನಾಕಾದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಧರ್ಮಗುರು ಬಾಗಲಿ ಮೌಲಾನ ಹೇಳಿದರು.

ನಗರದ ಪ್ರತಿ ಬಡಾವಣೆಗಳಲ್ಲಿ ಬೆಳಿಗ್ಗೆಯಿಂದ ಬಕ್ರೀದ್ ಸಂಭ್ರಮ ಕಂಡು ಬಂತು. ಪ್ರಾರ್ಥನೆ ನಂತರ ಮಧ್ಯಾಹ್ನ ಸುರಕುಂಬ, ಇತರ ಭಕ್ಷ್ಯಗಳನ್ನು ಸಿದ್ಧ ಪಡಿಸಿ ತಮ್ಮ ಆಪ್ತರಿಗೆ, ಸಂಬಂಧಿಕರಿಗೆ ಹಂಚಿ, ಭೋಜನ ಸವಿದರು.

ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ, ಅಂಜುಮನ್‌ ಅಧ್ಯಕ್ಷ ಯೂಸುಫ್ ನಮಾಜಿ,  ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಜಿ.ಎಂ.ದಂಡಿನ, ಉಮರ್‌ ಫಾರೂಕ್‌ ಹುಬ್ಬಳ್ಳಿ, ಮೊಹಮ್ಮದ್ ಮುಲ್ಲಾ, ರಿಯಾಜ್ ಢಾಲಾಯತ್, ಅಕ್ಬರಸಾಬ್‌ ಬಬರ್ಚಿ, ಸಾದಿಕ್‌ ನರ ಗುಂದ, ದಾಯಮ್ಮನವರ, ಶಫಿ ಕುದರಿ, ಮಕ್ಬುಲ್‌ ಶಿರಹಟ್ಟಿ, ಎಂ.ಸಿ.ಶೇಖ್, ಝಾಕೀರ್‌ ಮುಜಾರ್, ಚಾಂದಸಾಬ್ ಕೊಟ್ಟೂರ, ಅನ್ವರಸಾಬ್‌ ಶಿರಹಟ್ಟಿ ಇದ್ದರು.

ಹಜ್‌ ಯಾತ್ರೆ ಮುಗಿಸಿ ಮರಳಿ ನಗರಕ್ಕೆ: ವಿಶ್ವದ ಮೂಲೆ ಮೂಲೆಗಳಿಂದ ಹಜ್ ಯಾತ್ರೆ ಕೈಗೊಂಡಿದ್ದ ಯಾತ್ರಿಗಳು ಪ್ರವಾದಿ ಮಹ್ಮದ್‌ ಅವರ ಕರ್ಮ ಭೂಮಿ ಮೆಕ್ಕಾ, ಮದೀನಾ ಪವಿತ್ರ ಸ್ಥಳ ಗಳಿಗೆ ಭೇಟಿ ನೀಡಿ ದರ್ಶನ ಪಡೆದು  ಧಾರ್ಮಿಕ ವಿಧಿ, ವಿಧಾನ ಪೂರೈಸುತ್ತಾರೆ. ಕಾಬಾ ದರ್ಶನ ಮತ್ತು ಕೆಟ್ಟ ಗುಣಗಳ ಸಂಕೇತವಾದ ಸೈತಾನನಿಗೆ ಕಲ್ಲು ಹೊಡೆಯುವ ಸಂಪ್ರ ದಾಯ ಇದೆ. ಬಳಿಕ ಬಕ್ರೀದ್ ದಿನ ತಮ್ಮ ತಾಯ್ನಾಡಿಗೆ ಮರಳಿ ಸಂಬಂಧಿಕರ ಜತೆ ಸಡಗರದಿಂದ ಹಬ್ಬ ಆಚರಿಸುತ್ತಾರೆ.

‘ಭಾವೈಕ್ಯ  ಬೆಳಯಲಿ’
ರೋಣ: ಪಟ್ಟಣದ ಈದ್ಗಾ ಮೈದಾನ ದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸ್ಲಿಮರು ಬಕ್ರೀದ್ ಆಚರಿಸಿದರು. ಈ ಸಂದರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಎಲ್ಲ ಹಬ್ಬಗಳ ಆಚರಣೆ ಭಾವೈಕ್ಯ ಸಂದೇಶ ಸಾರಬೇಕು ಎಂದರು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಶೋಕ ನವಲಗುಂದ, ಅಂಜುಮನ್ ಕಮೀಟಿ ಅಧ್ಯಕ್ಷ ಭಾವಾ ಸಾಬ್ ಬೆಟಗೇರಿ, ಪುರಸಭೆ ಸದಸ್ಯ ಖಾದೀರಸಾಬ್ ಸಂಕನೂರ, ಭಗತ ಯುವ ಸೇನಾ ರಾಜ್ಯ ಘಟಕದ ಅಧ್ಯಕ್ಷ ನೂರೂಲ್ಲಾ ಬಳ್ಳಾರಿ, ಅಬ್ದುಲಸಾಬ್ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.