ADVERTISEMENT

‘ನಿಗದಿತ ಅವಧಿಯಲ್ಲಿ ಅನುದಾನ ಬಳಸಿ’

​ಪ್ರಜಾವಾಣಿ ವಾರ್ತೆ
Published 17 ಮೇ 2017, 8:35 IST
Last Updated 17 ಮೇ 2017, 8:35 IST

ಗದಗ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಸರಿಯಾಗಿ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಲೆಕ್ಕ ಪರಿಶೀಲನೆ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯದ ವಿಧಾನ ಮಂಡಳ ಅನುಸೂಚಿತ ಜಾತಿ ಹಾಗೂ ಪಂಗಡಗಳ ಸದನ ಸಮಿತಿ ಅಧ್ಯಕ್ಷ ಶಿವಮೂರ್ತಿ ನಾಯಕ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ನಿಗದಿತ ವರ್ಷದಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾದ ಅನುದಾನ ಪೂರ್ಣವಾಗಿ ವೆಚ್ಚ ಮಾಡಲು ಕ್ರಿಯಾ ಯೋಜನೆ ತಯಾರಿಸಬೇಕು.

ಒತ್ತುವರಿ, ಅಕ್ರಮ, ಸಕ್ರಮ ಸಂದರ್ಭದಲ್ಲಿ ಹಾಗೂ ಹೊರಗುತ್ತಿಗೆ ಆಧಾರದ ನೇಮಕಾತಿ ಯಲ್ಲಿ ಪರಿಶಿಷ್ಟರಿಗೆ ಮೊದಲ ಆದ್ಯತೆ ನೀಡಬೇಕು. ಪರಿಶಿಷ್ಟರಿಗೆ ಹಾಗೂ ಮಹಿಳೆಯರಿಗೆ ಉದ್ಯೋಗ ಯೋಜನೆ, ಸೊಸೈಟಿ ಸ್ಥಾಪನೆ, ವೃತ್ತಿ ಕೌಶಲ ಶಿಕ್ಷಣದಲ್ಲಿ ಹೆಚ್ಚಿನ ಅವಕಾಶ ನೀಡಿ ಮುಖ್ಯವಾಹಿನಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ADVERTISEMENT

ಅರಣ್ಯ ವ್ಯಾಪ್ತಿಯಲ್ಲಿ ಬರುವ ತಾಂಡಾಗಳಲ್ಲಿ ಪರಿಶಿಷ್ಟರಿಗೆ ಜಮೀನು ಹಕ್ಕು ನೀಡಲು ಅರಣ್ಯ ಕಾಯ್ದೆ ಅಡಿ ಅವಕಾಶ ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯಲ್ಲಿ ಒಟ್ಟು 615 ಫಲಾನುಭವಿಗಳಿಗೆ ಅರಣ್ಯ ಜಮೀನು ಸಾಗುವಳಿ ಹಕ್ಕು ಪತ್ರ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ ತಿಳಿಸಿದರು.

ಜಿಲ್ಲೆಯಲ್ಲಿ 2011ರ ಗಣತಿ ಪ್ರಕಾರ 10.64 ಲಕ್ಷ ಜನಸಂಖ್ಯೆ ಪೈಕಿ 1.74 ಲಕ್ಷ ಪರಿಶಿಷ್ಟ ಜಾತಿ ಹಾಗೂ 61,654 ಪರಿಶಿಷ್ಟ ಪಂಗಡದವರು ಇದ್ದಾರೆ. ಪರಿಶಿಷ್ಟ ಜಾತಿಯ 284 ಕಾಲೊನಿ, ಪಂಗಡದ 176 ಕಾಲೊನಿ ಹಾಗೂ ದಾಖಲೆ ರಹಿತ 72 ತಾಂಡಾಗಳಿವೆ. ಪರಿಶಿಷ್ಟರ ಅಭಿವೃದ್ಧಿಗೆ ಸರ್ಕಾರದ ಎಲ್ಲ ಸೌಲಭ್ಯಗಳು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ್ ಜೈನ್ ಹೇಳಿದರು.

ಸಹಕಾರ, ಅರಣ್ಯ, ಕೃಷಿ, ತೋಟಗಾರಿಕೆ, ವಸತಿ, ಕೈಗಾರಿಕೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ವಿಶೇಷ ಘಟಕ  ಹಾಗೂ ಗಿರಿಜನ ಉಪಯೋಜನೆ ಅನುದಾನ ವೆಚ್ಚ ಪರಿಶೀಲಿಸಿದ ಶಿವಮೂರ್ತಿ ಅವರು, ಕೇಂದ್ರ ಸರ್ಕಾರ ಪರಿಶಿಷ್ಟರಿ ಗಾಗಿ ನೀಡುವ ಅನುದಾನದ ಮಾಹಿತಿ ಯನ್ನು ಒಟ್ಟಾಗಿ ಸಂಗ್ರಹಿಸಿ ಸಲ್ಲಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜಿ.ಗದ್ಯಾಳ, ನಗರಾಭಿ ವೃದ್ಧಿ ಕೋಶದ ಯೋಜನಾ ನಿರ್ದೆಶಕ ರಮೇಶ ದೇಸಾಯಿ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಮಹೇಶ, ಯೋಜನಾ ನಿರ್ದೇಶಕ ಟಿ.ದಿನೇಶ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಖಾಜಾ ಹುಸೇನ ಮುಧೋಳ, ಅರಣ್ಯ ಸಂರ ಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ  ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.