ADVERTISEMENT

ಪುತ್ರನ ರಕ್ಷಣೆಗೆ ಕುಟುಂಬದವರ ತೆವಲಾಟ!

ಯುವ­ಕನಿಗೆ ಕ್ಯಾನ್ಸರ್‌ ಕಂಟಕ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2014, 6:13 IST
Last Updated 2 ಆಗಸ್ಟ್ 2014, 6:13 IST

ಗಜೇಂದ್ರಗಡ: ವಿಕಲಾಂಗ ತಂದೆ–ತಾಯಿ, ಬುದ್ಧಿಮಾಂದ್ಯ ಸಹೋದರಿ ಆರೈಕೆಯ ನೊಗ ಹೊರಬೇಕಿದ್ದ ಯುವ­ಕನಿಗೆ ಎಲುಬು ಕ್ಯಾನ್ಸರ್‌ ಕಂಟಕ!. ಕಿತ್ತು ತಿನ್ನುವ ಬಡತನದ ಮಧ್ಯೆಯೂ ಮಹಾ­ಮಾರಿ ಕಾಯಿಲೆಯಿಂದ ಪುತ್ರನನ್ನು ರಕ್ಷಿಸಿಕೊಳ್ಳಲು ಕುಟುಂಬದವರ ತೆವಲಾಟ!

ಹೌದು, ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಕನಿಷ್ಠ ನಾಗರಿಕ ಮೂಲ­ಸೌಕರ್ಯಗಳಿಂದ ವಂಚಿತಗೊಂಡು ಕುಗ್ರಾಮದಂತೆ ನರಳುತ್ತಿರುವ ಅಮರ­ಗಟಯ ಹದಿನಾರು ವರ್ಷದ ಸುರೇಶ ಶರಣಪ್ಪ ಬತ್ಲಿ ಎಂಬ ಯುವಕ ­ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಬಡತನದ ಬೇಗೆಯಲ್ಲಿ ಬೆಂದು ಬಸವಳಿದ ಬತ್ಲಿ ಕುಟುಂಬದ ಜವಾ­ಬ್ದಾರಿಯ ನೊಗ ಹೊರಬೇಕಿದ್ದ ಯುವಕ ಸುರೇಶನ ಎಡಗಾಲಿಗೆ ಕಳೆದ ನಾಲ್ಕು ತಿಂಗಳಿನಿಂದ ಅಂಟಿಕೊಂಡಿರುವ ಎಲುಬು ಕ್ಯಾನ್ಸರ್‌ ಗುಣಪಡಿಸುವ ಉದ್ದೇಶದಿಂದ ಬಾಗಲಕೋಟೆ ಹಾಗೂ ಹುಬ್ಬ­ಳ್ಳಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಆದರೆ, ಕಾಯಿಲೆ ಮಾತ್ರ ಗುಣಮುಖ­ವಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಕಾಯಿಲೆ ತೀವ್ರ ಸ್ವರೂಪ ಪಡೆದು­ಕೊಳ್ಳುತ್ತಿದೆ.

ನಾಲ್ಕು ತಿಂಗಳಲ್ಲಿ ಸುರೇಶನಿಗೆ ಅಂಟಿಕೊಂಡಿರುವ ಎಲುಬು ಕ್ಯಾನ್ಸರ್‌ ಗುಣಪಡಿಸುವುದಕ್ಕಾಗಿ ಖಾಸಗಿ ಆಸ್ಪತ್ರೆ­ಗಳಿಗೆ ಅಲೆದು–ಅಲೆದು ಸುಸ್ತಾಗಿ­ರುವ ಬತ್ಲಿ ಕುಟುಂಬ ಸದಸ್ಯರಿಗೆ ಇದೀಗ ಸುರೇಶನ ಕಾಯಿಲೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವುದು ನುಂಗಲಾ­ರದ ತುತ್ತಾಗಿ ಪರಿಣಮಿಸಿದೆ. ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ ಎಂಬ ಸ್ಥಳೀಯ ವೈದ್ಯರ ಸಲಹೆಯಿಂದ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿ­ತಿಯ ಮಧ್ಯೆಯೂ ಮಗನನ್ನು ಕಾಯಿಲೆ­ಯಿಂದ ವಿಮುಕ್ತಿಗೊಳಿಸಲು ನೆರವಿನ ಹಸ್ತ ಚಾಚುವ ಉದಾರಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಶರಣಪ್ಪ ಶರಣವ್ವ ಬತ್ಲಿ ಎಂಬ ಅನಕ್ಷರಸ್ಥ ದಂಪತಿಗಳ ಮೂರನೇ ಪುತ್ರನಾಗಿ ಜನಿಸಿದ ಸುರೇಶಗೆ ಅಕ್ಷರ ಜ್ಞಾನ ಪಡೆಯುವ ಹಂಬಲವಿದ್ದರೂ ಕುಟುಂಬದ ಕಿತ್ತು ತಿನ್ನುವ ಬಡತನ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ.

‘ಮಗ ಆರಾಮಾದ್ರ ಸಾಕು ಅಂತ ಕಂಡ–ಕಂಡವರ ಹತ್ರ ಸಾಲಾ ಮಾಡಿವಿ. ಇದ್ದ ಮೂವತ್ತ್‌ ಕುರಿ ಮಾರಿವಿ. ಆದ್ರ ಈಗ ದೊಡ್ಡ ದವಾಖಾನ್ಯಾಗ ಮಗನ ತೋರಸಾಕ ರೊಕ್ಕ್‌ ಇಲ್ಲರ್ರಿ. ಹ್ಯಾಂಗರ ಮಾಡಿ ನನ್ನ ಮಗನ ಉಳಿಸಿಕೊಡ್ರಿ ಎಪ್ಪಾ...’ ಎಂದು ಸುರೇಶನ ವಿಕಲಾಂಗ ತಂದೆ–ತಾಯಿ ಕಣ್ಣೀರಿಟ್ಟರು.

ಸುರೇಶನ ಕಾಯಿಲೆ ನಿವಾರಣೆಗಾಗಿ ಸಹೋದರ ಮಂಜುನಾಥ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಯರಗೇರಿ ಗ್ರಾಮದಲ್ಲಿ ಕುರಿಗಾರರೊಬ್ಬರ ಬಳಿ ಜೀತಕ್ಕೆ ಇದ್ದಾನೆ. ಈ ಕುರಿಗಾರ ಮುಂಗ­ಡ­ವಾಗಿ ₨ 30 ಸಾವಿರ ನೀಡಿದ್ದಾರೆ.

ಸಹೋದರ  ನೀಡಿದ ಹಣವೂ ಆಸ್ಪತ್ರೆ ಅಲೆದಾಟಕ್ಕೆ ಖರ್ಚಾ­ಗಿದೆ. ಸದ್ಯ ಸಾರಿಗೆ ವೆಚ್ಚವನ್ನು ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂದು ಕ್ಯಾನ್ಸರ್‌ ಪೀಡಿತ ಯುವಕ ಸುರೇಶ ವಿಧಿಯನ್ನು ಶಪಿಸುತ್ತಾ ಕಣ್ಣೀರಿಟ್ಟರು.
ಸುರೇಶ ಬತ್ಲಿಯ ಆಸ್ಪತ್ರೆ ವೆಚ್ಚ ಭರಿಸುವ ಉದಾರಿಗಳು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಮುಶಿಗೇರಿ ಖಾತೆ ಸಂಖ್ಯೆ–17139588772 (ಶರಣಪ್ಪ ಯಮನಪ್ಪ ಬತ್ಲಿ)ಗೆ ಸಂದಾಯ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.