ADVERTISEMENT

ಪ್ರತೀ ತಾಲ್ಲೂಕಿಗೆ ₹60 ಲಕ್ಷ ಅನುದಾನ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:14 IST
Last Updated 28 ಡಿಸೆಂಬರ್ 2016, 5:14 IST

ಗದಗ: ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಎಲ್ಲ ಇಲಾಖೆಗಳು ಯಾವುದೇ ಒಂದು ಕಾಮಗಾರಿ ಕೈಗೊಳ್ಳುವ ಮುನ್ನ ಆಯಾ ಪ್ರದೇಶದ ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಕಡ್ಡಾಯವಾಗಿ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದು ಜಿಲ್ಲಾ ಪಂಚಾಯ್ತಿ  ಅಧ್ಯಕ್ಷ ವಾಸಣ್ಣ ಕುರಡಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯ್ತಿ  ಸಭಾಂಗಣದಲ್ಲಿ ಮಂಗಳವಾರ ನಡೆದ  ಜಿಲ್ಲಾ ಪಂಚಾಯ್ತಿ  ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಿಗಳಿಗೆ ಮುಂಚಿತವಾಗಿ ಅವರ ವ್ಯಾಪ್ತಿಯ ಕಾಮಗಾರಿಗಳ ಕುರಿತು ಇಲಾಖೆ ಅಧಿಕಾರಿಗಳು ಮಾಹಿತಿ ನೀಡದೇ ಇರುವುದರಿಂದ ಹಲವಾರು ಸಂಶಯ ಹಾಗೂ ಆರೋಪಗಳಿಗೆ ಎಡೆಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಅಧಿಕಾರಿಗಳು ನಿಖರವಾದ ಮಾಹಿತಿ ನೀಡಿ, ಸರಿಯಾಗಿ ಕಾಮಗಾರಿಗಳ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಅವರು, ಹೇಳಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯ್ತಿ  ಅಧ್ಯಕ್ಷರು, ಈ ಮಾಹಿತಿ ನೀಡುವ ಕುರಿತು ಆದೇಶಿಸಿದರು.

ಜಿಲ್ಲೆಯ ಅಂಗನವಾಡಿಗಳ ಶುದ್ಧ ಕುಡಿಯುವ ನೀರು ಘಟಕಗಳ ಕುರಿತು ಗ್ರಾಮೀಣ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದಿಂದ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಈವರೆಗೆ 324 ಘಟಕಗಳನ್ನು ಹಸ್ತಾಂತರ ಮಾಡಲಾಗಿದೆ. ಗದಗ ತಾಲ್ಲೂಕಿನಲ್ಲಿ 82, ಮುಂಡರಗಿಯಲ್ಲಿ 66, ರೋಣದಲ್ಲಿ 121, ನರಗುಂದದಲ್ಲಿ 55 ಹಸ್ತಾಂತರಗೊಂಡ ಘಟಕಗಳ ಪೈಕಿ 47 ಶುದ್ಧ ನೀರಿನ ಘಟಕಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ ಎಂದು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರೋಹಿಣಿ ಹಿರೇಮಠ ತಿಳಿಸಿದರು.

ಎಲ್ಲಿದೆ ಕುಡಿಯುವ ನೀರಿನ ಸಮಸ್ಯೆ: ಶಿರಹಟ್ಟಿ ತಾಲ್ಲೂಕಿನ ಜಲ್ಲಿಗೇರಿ, ಅಕ್ಕಿಗುಂದ ತಾಂಡಾ, ತಾರಿಕೊಪ್ಪ, ಬನ್ನಿಕೊಪ್ಪ, ರೋಣ ತಾಲ್ಲೂಕಿನ ಹೊಳೆ ಆಲೂರ, ಯಾವಗಲ್ಲ, ಚಿಕ್ಕ ಮಲ್ಲೂರ, ಮೇಗಲಾಣ, ಮುಂಡರಗಿ ತಾಲ್ಲೂಕಿನ ಹಳ್ಳಿಗುಡಿ, ಹಳ್ಳಿಕೇರಿ, ವೆಂಕಟಾಪೂರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯ್ತಿ  ಸದಸ್ಯರಾದ ರೇಖಾ ಅಳವಂಡಿ, ಶಿವಕುಮಾರ ನೀಲಗುಂದ, ಈರಪ್ಪ ನಾಡಗೌಡ್ರ, ಪಡಿಯಪ್ಪ ಪೂಜಾರ ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕುಡಿಯುವ ನೀರಿನ ಸಮಸ್ಯೆ ಗಂಭೀರ ವಿಷಯವಾಗಿದೆ. ಸರ್ಕಾರ ನೀರು ಪೂರೈಕೆಗಾಗಿ ಈಗಾಗಲೇ ಪ್ರತಿತಾಲ್ಲೂಕಿಗೆ ₹ 60 ಲಕ್ಷ ವಿಶೇಷ ಅನುದಾನ ಬಿಡುಗಡೆ ಮಾಡಿದೆ ಎಂದರು.

ಶಾಲಾ ಕೊಠಡಿಗಳ ದುರಸ್ತಿ ಕಾರ್ಯ: ರೋಣ ತಾಲ್ಲೂಕಿನ ಮೆಣಸಗಿ ಸರ್ಕಾರಿ ಶಾಲೆ, ಶಿರಹಟ್ಟಿಯ ಶಿಗ್ಲಿ ಆಶ್ರಮ ಶಾಲೆಯ ಕೊಠಡಿ, ಅಡುಗೆ ಕೋಣೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ದುರಸ್ತಿ ಕುರಿತ ಸಮಗ್ರ ವರದಿ ತಯಾರಿಸಿ, ಸರ್ಕಾರಕ್ಕೆ ₹40 ಕೋಟಿ ಅನುದಾನಕ್ಕೆ ವಿಶೇಷ ಪ್ರಸ್ತಾವ ಸಲ್ಲಿಕೆಯಾಗಿದೆ.

ಸಭೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಸಭೆಯ ನಡುವಳಿಗಳನ್ನು ಸಮಿತಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಕೃಷಿ ಮತ್ತು ಕೈಗಾರಿಕಾ ಸಮಿತಿ ಸಭೆಯ ನಡುವಳಿಯನ್ನು ಸಮಿತಿ ಅಧ್ಯಕ್ಷ ಎಸ್.ಪಿ.ಬಳಿಗಾರ, ಸಾಮಾಜಿಕ ನ್ಯಾಯ ಸಮಿತಿ ಸಭೆಯ ನಡುವಳಿಗಳನ್ನು ಸಮಿತಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಸಾಮಾನ್ಯ ಸ್ಥಾಯಿ ಸಮಿತಿ ಸಭೆಯ ನಡಾವಳಿಗಳನ್ನು ಜಿಲ್ಲಾ ಪಂಚಾಯ್ತಿ  ಉಪಾಧ್ಯಕ್ಷೆ ರೂಪಾ ಅಂಗಡಿ, ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಯೋಜನಾ ಸ್ಥಾಯಿ ಸಮಿತಿ ಸಭೆಯ ನಡಾವಳಿಯನ್ನು ವಾಸಣ್ಣ ಕುರಡಗಿ ಅನುಮೋದನೆಗಾಗಿ ಮಂಡಿಸಿದರು.

ಜಿಲ್ಲಾ ಪಂಚಾಯ್ತಿ  ಸದಸ್ಯರಾದ ಶಕುಂತಲಾ ಮೂಲಿಮನಿ, ಹನುಮಂತಪ್ಪ ಪೂಜಾರ, ಸಿದ್ದಲಿಂಗೇಶ್ವರ ಪಾಟೀಲ, ವಿವಿಧ ಸಮಸ್ಯೆಗಳ ಕುರಿತು ಮಾತನಾಡಿದರು. ಜಿಲ್ಲಾ ಪಂಚಾಯ್ತಿ  ಉಪಕಾರ್ಯದರ್ಶಿ ಎಸ್.ಸಿ.ಮಹೇಶ, ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ, ಮುಖ್ಯ ಯೋಜನಾಧಿಕಾರಿ, ಶಂಪೆ ಶಂಕರ ಇದ್ದರು.

*
ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಯ ಜನಪ್ರತಿ ನಿಧಿಗಳು, ಅಧಿಕಾರಿಗಳು ರೈತರಿಗೆ ತಿಳಿವಳಿಕೆ ನೀಡಿ, ಬೆಳೆ ವಿಮೆ ವಂತಿಗೆ ತುಂಬಿ ನೋಂದಣಿ ಮಾಡಿಸಲು ಮುಂದಾಗಬೇಕು.
-ವಾಸಣ್ಣ ಕುರಡಗಿ,
ಜಿಲ್ಲಾ ಪಂಚಾಯ್ತಿ  ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT