ADVERTISEMENT

ಬಡವರಿಗೆ ಶೀಘ್ರ ಆಶ್ರಯ ಮನೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 5:21 IST
Last Updated 5 ಸೆಪ್ಟೆಂಬರ್ 2017, 5:21 IST
ಆಶ್ರಯ ಮನೆಗಳನ್ನು ನಿರ್ಮಿಸಕೊಡಬೇಕು ಎಂದು ಒತ್ತಾಯಿಸಿ ಮುಂಡರಗಿಯಲ್ಲಿ ವಸತಿ ರಹಿತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು
ಆಶ್ರಯ ಮನೆಗಳನ್ನು ನಿರ್ಮಿಸಕೊಡಬೇಕು ಎಂದು ಒತ್ತಾಯಿಸಿ ಮುಂಡರಗಿಯಲ್ಲಿ ವಸತಿ ರಹಿತರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಬಡವರಿಗೆ ಆಶ್ರಯ ಮನೆ ನೀಡುವ ಕುರಿತಂತೆ ಪುರಸಭೆಯು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದ ಬಡ ಜನರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪುರಸಭೆ ಉದ್ಯಾನದಿಂದ ಹೊರಟ ಪ್ರತಿಭಟನಾಕಾರರು ಪಟ್ಟಣದ ಗಾಂಧೀ ವೃತ್ತ, ಜಾಗೃತ ವೃತ್ತ, ಕೊಪ್ಪಳ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ಪುರಸಭೆ ಕಾಂಗ್ರೆಸ್ ಸದಸ್ಯ ಸೋಮ ನಗೌಡ ಗೌಡ್ರ ಮಾತನಾಡಿ, ಪಟ್ಟಣದಲ್ಲಿ ಬಡವರಿಗೆ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಬೇಕು ಎನ್ನುವ ಉದ್ದೇಶ ದಿಂದ ಪುರಸಭೆಯ ಆಶ್ರಯ ಕಮಿಟಿ ಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತಂತೆ ತಾಲ್ಲೂಕಿನ ಶಿರೂಳ ಗ್ರಾಮದ ಬಳಿ 24ಎಕರೆ ಜಮೀನು ಖರೀದಿಸಲು ತೀರ್ಮಾನ ತಗೆದುಕೊಳ್ಳಲಾಗಿತ್ತು.

ಆದರೆ ಜಮೀನು ಖರೀದಿಗೆ ಪುರಸಭೆ ಆಡಳಿತ ಮಂಡಳಿ ವಿನಾಕಾರಣ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಸದಸ್ಯೆ ರಹೀನಾಬೇಗಂ ಕೆಲೂರ ಮಾತನಾಡಿ, ಪುರಸಭೆಗೆ ಆಶ್ರಯ ಮನೆ ನೀಡುವಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಬಡವರು ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಹಲವಾರು ವರ್ಷಗಳಿಂದ ಪಟ್ಟಣದ ಬಡಜನತೆ ಮನೆಗಳಿಲ್ಲದೆ ಬೀದಿಗಳಲ್ಲಿ ಜೀವನ ನಡೆಸುತ್ತಿದ್ದಾರೆ. ಅಂತಹ ಬಡ ವರಿಗೆ ಆಶ್ರಯ ಮನೆ ಅವಶ್ಯವಾಗಿದೆ. ಪುರಸಭೆ ಆಡಳಿತ ಮಂಡಳಿ ಅವರು ಭೂಮಿ ಖರೀದಿಸಲು ವಿರೋಧಿಸುತ್ತಿದ್ದು, ಅನ್ಯಾಯ ಮಾಡುತ್ತಿರುವ ಪುರಸಭೆ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇಮಾಂಬಿ ಡಂಬಳ ಮಾತನಾಡಿ, ಮತ ಕೇಳುವಾಗ ಮನೆಗೆ ಬಂದು ಕಾಲು ಮುಗಿದು ನಮಗೆ ಮತ ನೀಡಿ ನಿಮಗೆ ಬೇಕಾದ ಸೌಲಭ್ಯ ಕಲ್ಪಿಸುತ್ತೇವೆ ಎಂದು ಪೊಳ್ಳು ಭರವಸೆ ನೀಡುವ ಜನಪ್ರತಿ ನಿಧಿಗಳು ಅಧಿಕಾರಕ್ಕೆ ಬಂದ ಮೇಲೆ ಬಡವರನ್ನು ಸಂಪೂರ್ಣವಾಗಿ ನಿರ್ಲಕ್ಷಿ ಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ನಬೀಸಾಬ್ ಕೆಲೂರ ಮಾತನಾಡಿದರು. ಶಿರಸ್ತೇದಾರ ರಮೇಶ ಬಾಳೆಹೊಸೂರ ಮನವಿ ಸ್ವೀಕರಿಸಿದರು.

ಪುರಸಭೆ ಸದಸ್ಯರಾದ ಪ್ರೇಮಾ ಗಣದಿನ್ನಿ, ದಾನೇಶ್ವರಿ ಭಜಂತ್ರಿ, ಸಂತೋಷ ಹಿರೇಮನಿ, ಮುಖಂಡರಾದ ರಾಜೇಸಾಬ್ ಬೆಟಗೇರಿ, ಎಂ.ಎಚ್. ತಳಗಡೆ, ಅಡಿವೆಪ್ಪ ಚಲವಾದಿ, ಪದ್ಮಾವತಿ ಬಡಿಗೇರ, ಸಾದೀಕ್ಅಲಿ ಹೊಸಪೇಟಿ, ರೆಹಮಾನ್‌ ಸಾಬ್ ಅಬ್ಬಿಗೇರಿ, ಜಯಶ್ರೀ ಕುಂಕಮಗಾರ, ಲಕ್ಷ್ಮಿ ರಾಯದುರ್ಗ, ರಜೀಯಾ ಒಂಟಿ, ರಾಧಾ ಬಿಸನಳ್ಳಿ, ಶಬೀನಾ ಕರ್ನಾಚಿ, ಗೀತಾ ಹಡಪದ, ಇಸ್ಮಾಯಿಲ್ ಬಿಜಾ ಪುರ, ಜಮೀರ ಡಂಬಳ, ಮಾಬುಸಾಬ್ ಕೊಕ್ಕರಗುಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.