ADVERTISEMENT

‘ಬರ ನಿರ್ವಹಣೆ ವಿಫಲಕ್ಕೆ ಸಚಿವ ಎಚ್ಕೆ ಕಾರಣ’

ಧರಣಿ 531ನೇ ದಿನಕ್ಕೆ: ಮಹಾದಾಯಿಗೆ ಸಾಂಘಿಕ ಪ್ರಯತ್ನ ಅಗತ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:13 IST
Last Updated 28 ಡಿಸೆಂಬರ್ 2016, 5:13 IST

ನರಗುಂದ: ಕಳೆದ ಮೂರು ವರ್ಷಗಳಿಂದ ಸತತ ಬರಗಾಲ ಆವರಿಸುತ್ತಿರುವ ಪರಿಣಾಮ ಈ ಭಾಗದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಇದರ ಬಗ್ಗೆ  ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ ಹೊರತು, ಅದನ್ನು ನಿರ್ವಹಿಸುಲ್ಲಿ ವಿಫಲವಾಗಿದೆ ಎಂದು ಮಹಾದಾಯಿ ಹೋರಾಟ ಸಮಿತಿ ವಕ್ತಾರ ಶ್ರೀಶೈಲ ಮೇಟಿ ದೂರಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ  531 ದಿನವಾದ ಮಂಗಳವಾರ ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಬರ ನಿರ್ವಹಣೆ ಯಾಗುತ್ತಿಲ್ಲ. ಸಾಮಾನ್ಯರ ಬದುಕು ನರಕಯಾತನೆಗೆ ಈಡಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಜಾನುವಾರುಗಳಿಗೆ ಮೇವು ಪೂರೈಸಲು ಕೋರಿ ಕಳೆದ  ತಿಂಗಳು ಡಿಸಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಮೇವು, ಆಹಾರವಿಲ್ಲದೇ ಜಾನುವಾರುಗಳ ಕಷ್ಟ ಹೇಳತೀರದಾಗಿದೆ. ಇದರ ಬಗ್ಗೆ ತಾಲ್ಲೂಕಾಡಳಿತ ದಿವ್ಯ ನಿರ್ಲಕ್ಷ್ಯ ತೋರಿದೆ. ಇದನ್ನು ರೈತರು ಸಹಿಸುವ ಕಾಲ ಮುಗಿದಿದೆ. ಇದರ ಬಗ್ಗೆ ಕೂಡಲೇ ಗಮನ ಕೊಡಬೇಕು. ಇಲ್ಲವಾದರೆ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಹಾದಾಯಿ ಹೋರಾಟ ಸಮಿತಿ ಸದಸ್ಯ ಚಂದ್ರಗೌಡ ಪಾಟೀಲ ಮಾತನಾಡಿ, ಈ ಭಾಗದ ಸಂಸದರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ನಮ್ಮ ಕೂಗನ್ನು ಪ್ರಧಾನಿಗಳ ಬಳಿ ಒಯ್ಯುತ್ತಿಲ್ಲ. ಇದರಿಂದ ರೈತರು ರೋಸಿಹೋಗಿದ್ದಾರೆ. ಆದ್ದರಿಂದ ಇಂದು ಎಲ್ಲ ರೈತರು ಸಭೆ ನಡೆಸಿ  ಒಂದು ಅಂತಿಮ ನಿರ್ಣಯಕ್ಕೆ ಬರಲಾಗಿದೆ ಎಂದರು.

ಧರಣಿಯಲ್ಲಿ  ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಎಸ್‌.ಬಿ.ಜೋಗಣ್ಣವರ,  ಜಗದೀಶ ಬೆಳವಟಗಿ,,  ಭೀಮಪ್ಪ ದಿವಟಗಿ, ಪುಂಡಲೀಕ ಯಾದವ, ವಾಸು ಚವ್ಹಾಣ, ಚನ್ನಬಸು ಹುಲಜೋಗಿ, ಎಸ್‌.ಕೆ.ಗಿರಿಯಣ್ಣವರ, ಸೋಮಲಿಂಗಪ್ಪ ಆಯಟ್ಟಿ, ವೀರಣ್ಣ ಸೊಪ್ಪಿನ, ವೆಂಕಪ್ಪ ಹುಜರತ್ತಿ, ಹನಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.