ADVERTISEMENT

ಬರ ಸ್ಥಿತಿ ನಿಯಂತ್ರಣಕ್ಕೆ ನರೇಗಾ ಸಹಾಯಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:25 IST
Last Updated 17 ಏಪ್ರಿಲ್ 2017, 6:25 IST
ಗದಗ ತಾಲ್ಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಣ್ಣು ಮತ್ತು ನೀರು ಸಂವರ್ಧನೆಗಾಗಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ವೀಕ್ಷಿಸಿ,ಕೂಲಿ ಕಾರ್ಮಿಕರ ಕುಂದು ಕೊರತೆ ಆಲಿಸಿದರು
ಗದಗ ತಾಲ್ಲೂಕಿನ ಹಿರೇಹಂದಿಗೋಳ ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಣ್ಣು ಮತ್ತು ನೀರು ಸಂವರ್ಧನೆಗಾಗಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿ ವೀಕ್ಷಿಸಿ,ಕೂಲಿ ಕಾರ್ಮಿಕರ ಕುಂದು ಕೊರತೆ ಆಲಿಸಿದರು   

ಗದಗ: ರಾಜ್ಯ ಸರ್ಕಾರದ ಅನ್ನಭಾಗ್ಯ, ಶುದ್ಧ ನೀರಿನ ಘಟಕಗಳ ಸ್ಥಾಪನೆ ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯಿಂದ ಗ್ರಾಮೀಣ ಪ್ರದೇಶದಲ್ಲಿ ಬರ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ತಾಲ್ಲೂಕಿನ ಬಿಂಕದಕಟ್ಟಿ, ಹಿರೇಹಂದಿಗೋಳ ಗ್ರಾಮಗಳ ವ್ಯಾಪ್ತಿಯ ರೈತರ 643 ಹೆಕ್ಟೇರ್‌ ಕೃಷಿ ಜಮೀನುಗಳಲ್ಲಿ ಕಳೆದ ಮೂರು ತಿಂಗಳಿಂದ ಅಂದಾಜು ₹16.50 ಕೋಟಿ ವೆಚ್ಚದಲ್ಲಿ ಮಣ್ಣು ಮತ್ತು ನೀರು ಸಂವರ್ಧನೆಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 689 ಕೃಷಿ ಹೊಂಡ, 271 ಕೋಡಿ ಮತ್ತು 597 ಹೊಳೆಗಟ್ಟಿಗಳನ್ನು ರೈತರ ಹೊಲಗಳಲ್ಲಿ ಬದುಗಳ ಪುನರ್‌ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದವರಿಗೂ ಬರ ಪರಿಸ್ಥಿತಿ ಸಂಕಷ್ಟವನ್ನು ತಂದೊಡ್ಡಿದೆ. ನರೇಗಾ ಯೋಜನೆ ಅವರಿಗೂ ತಕ್ಕ ಮಟ್ಟಿಗೆ ಆಸರೆಯಾಗಿದೆ. ನೆಲ, ಜಲ ಸಂವರ್ಧನೆಯ ಕಾಮಗಾರಿಯಲ್ಲಿ ಬೆವರು ಸುರಿಸಿ ದುಡಿದರೆ, ಈ ಯೋಜನೆಗೆ ಗೌರವ ಸಲ್ಲುತ್ತದೆ ಎಂದರು.ಉದ್ಯೋಗ ಖಾತ್ರಿ ಯೋಜನೆಯಡಿ ರಿಜ್ ವ್ಯಾಲಿ ಹಳ್ಳ ಕೊಳ್ಳಗಳ ಮಧ್ಯದ ಭೂಮಿ ಅಭಿವೃದ್ಧಿಪಡಿಸುವ ಅವಕಾಶ ಬಳಸಿಕೊಂಡು ಬಿಂಕದಕಟ್ಟಿ ಗ್ರಾಮ ಪಂಚಾಯಿತಿಯ ನೆಲ, ಜಲ ಸಂವರ್ಧನೆ ಕಾರ್ಯ ಮಾದರಿಯಾಗಿದೆ ಎಂದರು.

ADVERTISEMENT

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದಲ್ಲಿ ತೊಡಗಿದ್ದ  ಗ್ರಾಮಸ್ಥರೊಂದಿಗೆ ಮಾತನಾಡಿದ ಸಚಿವರು, ಉದ್ಯೋಗ ಖಾತ್ರಿ ಯೋಜನೆಯ ಪ್ರತಿದಿನದ ಕೂಲಿ ದರವನ್ನು ಇದೇ ಏಪ್ರಿಲ್‌ ತಿಂಗಳಿಂದ ₹ 224 ರಿಂದ ₹236 ಗೆ ಹೆಚ್ಚಳ ಮಾಡಲಾಗುವುದು. ಹದಿನೈದು ದಿನದ ನಂತರ ಕೂಲಿ ಹಣ ಖಾತೆಗೆ ಜಮೆ ಆಗದಿದ್ದರೆ, ಶೇ 0.05 ರಷ್ಟು ಒಟ್ಟು ಬಾಕಿ ಮೊತ್ತಕ್ಕೆ ಬಡ್ಡಿ ನೀಡಲಾಗುವುದು. ಕೆಲಸದಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ತತ್ಕಾಲಿಕ ಯೋಗಕ್ಷೇಮ, ಉದ್ಯೋಗ ಸ್ಥಳದಲ್ಲಿ ಕುಡಿಯುವ ನೀರು ಪೂರೈಕೆ, ಹಾಗೂ ಅಗತ್ಯ ತುರ್ತು ವೈದ್ಯಕೀಯ ಸೌಲಭ್ಯದ ಕುರಿತು ತಿಳಿಸಿದರು.

ದೂರು ಆಲಿಸಿದ ಸಚಿವ ಪಾಟೀಲ, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಸೂಚನೆ ನೀಡಿ, ಅಗತ್ಯ ಕ್ರಮ ಕೈಕೊಳ್ಳಬೇಕು. ಅರ್ಹರಿಗೆ ತಪ್ಪದೇ ಉದ್ಯೋಗ ಒದಗಿಸಬೇಕು. ನಿಗದಿತ ಅವಧಿಯಲ್ಲಿ ಕೂಲಿ ಹಣ ಪಾವತಿಸಬೇಕು ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದು ಪಾಟೀಲ, ಬಿಂಕದಕಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಬಿ.ಹುಚ್ಚಣ್ಣವರ, ತಾ.ಪಂ. ಇಓ ಡಾ. ಎಚ್.ಎಸ್. ಜಿನಗಿ, ಪಿಡಿಓ ಆರ್.ಎಂ.ಕಿರೇಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.