ADVERTISEMENT

ಬಿತ್ತನೆ ಬೀಜ ವಿತರಣೆಗೆ ಚಾಲನೆ

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ; ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:05 IST
Last Updated 26 ಮೇ 2018, 13:05 IST

ಮುಂಡರಗಿ: ‘ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ ಮುಂಗಾರು ಪೂರ್ವದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ರೈತರಿಗೆ ನೆರವು ನೀಡಲು ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳು ಸಿದ್ಧತೆಗಳನ್ನು ಮಾಡಿಕೊಂಡಿವೆ’ ಎಂದು ರೈತ ಸಂಪರ್ಕ ಕೇಂದ್ರದ ಹಿರಿಯ ಅಧಿಕಾರಿ ಪಿ.ವೈ.ಕುದರಿಮೋತಿ ತಿಳಿಸಿದರು.

ಪಟ್ಟಣದ ಹಳೇ ಎ.ಪಿ.ಎಂ.ಸಿ.ಯಲ್ಲಿ ಇರುವ ಮುಂಡರಗಿ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಶುಕ್ರವಾರ ರೈತರಿಗೆ ಬೀಜ, ಗೊಬ್ಬರ ಹಾಗೂ ಮತ್ತಿತರ ಸಾಮಗ್ರಿ ವಿತರಿಸಿ ಅವರು ಮಾತನಾಡಿ, ‘ಹೆಸರು ಬಿತ್ತನೆಗೆ ಇದು ಸಕಾಲವಾಗಿದ್ದು, ತಾಲ್ಲೂಕಿನ ರೈತರು ಹೆಸರು ಬಿತ್ತನೆಗೆ ಈಗಾಗಲೇ ತಮ್ಮ ಜಮೀನುಗಳನ್ನು ಹದಗೊಳಿಸಿದ್ದಾರೆ. ಕೃಷಿ ಇಲಾಖೆಯು ರೈತರಿಗೆ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಹೆಸರು ಹಾಗೂ ಜೋಳದ ಬೀಜಗಳನ್ನು ಪೂರೈಸಲು ಸಿದ್ಧವಾಗಿದೆ’ ಎಂದು ತಿಳಿಸಿದರು.

‘ಆಸಕ್ತ ರೈತರು ತಮ್ಮ ಕೃಷಿ ಪಾಸ ಬುಕ್ಕುಗಳನ್ನು ಸಲ್ಲಿಸಿ ಸಹಾಯ ಧನದಲ್ಲಿ ಬೀಜ ಪಡೆದುಕೊಳ್ಳಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ರೈತರಿಗೆ ವಿಶೇಷ ಸಹಾಯ ಧನ ನೀಡುತ್ತಿದ್ದು, ಅವರು ಕಡ್ಡಾಯವಾಗಿ ಜಾತಿ ಪ್ರಮಾಣಪತ್ರ ಸಲ್ಲಿಸಬೇಕು’ ಎಂದರು.

ADVERTISEMENT

‘ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ 34.80 ಕ್ವಿಂಟಲ್ ಹೆಸರು ಹಾಗೂ 5.4ಕ್ವಿಂಟಲ್ ಜೋಳ ಸಂಗ್ರಹ
ಇದೆ. ಮುಂಬರುವ ದಿನಗಳಲ್ಲಿ ರೈತರಿಗೆ ಅಗತ್ಯವಿರುವ ತೊಗರಿ, ಸೂರ್ಯಕಾಂತಿ, ಸಜ್ಜಿ, ಗೋವಿನಜೋಳ ಮೊದಲಾದ ಬಿತ್ತನೆ ಬೀಜ ಪೂರೈಸಲಾಗುವುದು. ರೈತರು ಕೃಷಿ ಇಲಾಖೆಯ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಳೆಯಬೇಕು’ ಎಂದು ಮನವಿ ಮಾಡಿದರು.

ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಎ.ಡಿ.ಹೊಸಮನಿ, ಪ್ರಶಾಂತ ಅಸಲಿ, ಮಂಜುನಾಥ ಗೌಡರ, ಶೇಖಪ್ಪ ತುಂಬರಗುಪ್ಪಿ, ರೈತ ಮುಖಂಡರಾದ ಶಿವನಗೌಡ್ರ ಗೌಡ್ರ, ನಿಂಗಪ್ಪ ಭಂಡಾರಿ, ಭರಮಪ್ಪ ಚಲವಾಡಗಿ, ಕಿರಣ ಬಾರಕೇರ, ಕನಕಪ್ಪ ಕುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.