ADVERTISEMENT

ಮಲಪ್ರಭಾ ಬಲದಂಡೆ ಯೋಜನೆ ವಿಳಂಬ

ಕೃಷಿಕರ ಕಳವಳ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 6:11 IST
Last Updated 25 ಏಪ್ರಿಲ್ 2014, 6:11 IST
ಮಲಪ್ರಭಾ ಬಲದಂಡೆ ಯೋಜನೆಗೆ ಸಂಬಂಧಿಸಿದ ಎರಡನೆಯ ಹಂತದ ಯೋಜನೆಯಲ್ಲಿ ರೋಣ ತಾಲ್ಲೂಕಿನ ಇಟಗಿ ಗ್ರಾಮದ ಬಳಿ ನಿರ್ಮಾಣಗೊಳ್ಳುತ್ತಿರುವ ಪ್ರಮುಖ ಕಾಲುವೆ ನಿರ್ಮಾಣ ಕಾಮಗಾರಿ ಏಳು ವರ್ಷದಿಂದ ನನೆಗುದಿಗೆ ಬಿದ್ದಿದೆ.
ಮಲಪ್ರಭಾ ಬಲದಂಡೆ ಯೋಜನೆಗೆ ಸಂಬಂಧಿಸಿದ ಎರಡನೆಯ ಹಂತದ ಯೋಜನೆಯಲ್ಲಿ ರೋಣ ತಾಲ್ಲೂಕಿನ ಇಟಗಿ ಗ್ರಾಮದ ಬಳಿ ನಿರ್ಮಾಣಗೊಳ್ಳುತ್ತಿರುವ ಪ್ರಮುಖ ಕಾಲುವೆ ನಿರ್ಮಾಣ ಕಾಮಗಾರಿ ಏಳು ವರ್ಷದಿಂದ ನನೆಗುದಿಗೆ ಬಿದ್ದಿದೆ.   

ಗಜೇಂದ್ರಗಡ: ಕೃಷಿ ಕ್ಷೇತ್ರವನ್ನು ಶ್ರೀಮಂತ­ಗೊಳಿ­ಸುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ‘ಮಲಪ್ರಭಾ ಬಲದಂಡೆ’ ಯೋಜನೆಯ ಎರಡನೆಯ ಹಂತದ ಕಾಲುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಯೋಜನೆ ಜಾರಿಗೆ ಭಾರಿ ಹಿನ್ನಡೆ ಉಂಟಾ­ಗಿದೆ.

ರೋಣ ತಾಲ್ಲೂಕಿನ ಕೃಷಿ ಕ್ಷೇತ್ರವನ್ನು ಸಮೃದ್ಧ­ಗೊಳಿಸಲು ‘ಮಲಪ್ರಭಾ ಬಲದಂಡೆ’ ಯೋಜನೆ ಜಾರಿ ಅನಿವಾರ್ಯ ಎಂದುಕೊಂಡಿದ್ದ ಮಾಜಿ ಸಚಿವ ದಿ. ಅಂದಾನಪ್ಪ ದೊಡ್ಡಮೇಟಿ 1970 ರ ದಶಕ­ದಲ್ಲಿ ರೋಣ ತಾಲ್ಲೂಕಿಗೆ ಮಲಪ್ರಭಾ ಬಲ­ದಂಡೆ ಕಾಲುವೆ ಯೋಜನೆಯನ್ನು ಜಾರಿ­ಗೊಳಿಸಿದರು.

ಮುಂಬೈ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವ­ರಾಗಿದ್ದಾಗ ಈ ಯೋಜನೆಯನ್ನು ತಾಲ್ಲೂಕಿಗೆ ಸಮರ್ಪಿಸಿದ ದೊಡ್ಡಮೇಟಿ ಅವರು, ಮೊದಲ ಹಂತದಲ್ಲಿ ಬೆಳವಣಿಕಿ, ಕೌಜಗೇರಿ, ಮಲ್ಲಾಪುರ, ಸವಡಿ, ಚಿಕ್ಕಮಣ್ಣೂರ, ಅರಹುಣಸಿ ಮುಂತಾದ ಗ್ರಾಮಗಳಲ್ಲಿನ 35,765 ಹೆಕ್ಟೇರ್‌ ಪ್ರದೇಶಕ್ಕೆ ಯೋಜನೆ ಜಾರಿಗೊಂಡಿತು. ಸವದತ್ತಿಯ ನವಿಲ ತೀರ್ಥ ಜಲಾಶಯದಿಂದ ನೀರು ಹರಿಸುವುದು ಯೋಜನೆಯ ಉದ್ದೇಶವಾಗಿತ್ತು.

ಪರಿಣಾಮ ತಾಲ್ಲೂಕಿನ ರೋಣ, ಕೊತಬಾಳ, ಕೃಷ್ಣಾ­ಪೂರ, ಹಿರೇಹಾಳ, ನೈನಾಪೂರ ಮುಂತಾದ ಗ್ರಾಮಗಳು ಯೋಜನೆ ಜಾರಿಯಿಂದ ವಂಚಿತಗೊಂಡು ಮಳೆ ಆಶ್ರಿತ ಕೃಷಿಗೆ ಮುಂದಾದವು. ಆದರೆ, 1970 ರ ದಶಕದಲ್ಲಿ ಜಾರಿಗೊಂಡ ಯೋಜನೆಯನ್ನು ಜಾರಿಗೊಳಿಸುವ ಗೋಜಿಗೆ ಯಾವೊಬ್ಬ ಜನಪ್ರತಿನಿಧಿಗಳು ಮುಂದಾ­ಗಿರಲಿಲ್ಲ.

ಆದರೆ, ನೀರಾವರಿ ಯೋಜನೆಗೆ ಒಳಪಟ್ಟ ತಾಲ್ಲೂಕಿನ ಕೆಲ ಗ್ರಾಮಗಳು ಯೋಜನೆಯ ಲಾಭ ಪಡೆದು­ಕೊಂಡು ಸಮೃದ್ಧ ಕೃಷಿ ಮುಂದಾದವು.

2005 ರಲ್ಲಿ ಯೋಜನೆ ವಿಸ್ತರಣೆ: 2005ರಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಶಾಸಕರಾಗಿದ್ದ ವೇಳೆ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿ ಮಲಪ್ರಭಾ ಬಲದಂಡೆ ಯೋಜನೆ ವಿಸ್ತರಣೆಗೆ ಚಾಲನೆ ನೀಡಿದರು. 115 ರಿಂದ 142 ಕಿ.ಮೀ ವಿಸ್ತೀರ್ಣದ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿತು. ತಾಲ್ಲೂಕಿನ ಬೆಳವಣಿಕಿಯಿಂದ ಯೋಜನೆ ಎರಡು ವಿಭಾಗಗಳಾಗಿ ವಿಂಗ­ಡಣೆಯಾಗುತ್ತದೆ.

ಮೊದಲ ವಿಂಗಡಣೆ 27 ಕಿ.ಮೀ. ವಿಸ್ತೀರ್ಣ­ದ್ದಾಗಿದೆ. ಇದರಲ್ಲಿ ತಾಲ್ಲೂಕಿನ ಕೃಷ್ಣಾಪುರ, ರೋಣ, ಕೊತಬಾಳ, ಹಿರೇಹಾಳ, ನೈನಾಪೂರ, ಮಣ್ಣೇರಿ ಮುಂತಾದ ಗ್ರಾಮಗಳು ಒಳಪಡುತ್ತವೆ ಎರಡನೆಯ ವಿಂಗಡಣೆಯಲ್ಲಿ 25 ಕಿ.ಮೀ. ವಿಸ್ತೀರ್ಣ­ವಿದೆ. ಇದರಲ್ಲಿ ಜಿಗಳೂರ, ಹೊಸಳ್ಳಿ, ಇಟಗಿ, ಅಳಗುಂಡಿ, ಸೂಡಿ ಗ್ರಾಮಗಳನ್ನು ಒಳ­ಗೊಂಡಿದೆ. ಎರಡನೆಯ ಹಂತದ ಯೋಜನೆ ವಿಸ್ತ­ರಣೆಯಿಂದಾಗಿ ತಾಲ್ಲೂಕಿನ 25,235 ಹೆಕ್ಟೇರ್‌್ ಪ್ರದೇಶ ನೀರಾವರಿಗೆ ಒಳಪಡುತ್ತದೆ.

ಎರಡನೆಯ ಹಂತದ ಯೋಜನೆಗೆ ಸಂಬಂಧಿ­ಸಿದ ಪ್ರಮುಖ, ಉಪ ಕಾಲುವೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡು 9 ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರ ಜತೆಗೆ 13,548 ಹೆಕ್ಟೇರ್‌ ಪ್ರದೇಶದ ನೀರಾವರಿಗಾಗಿ ಹೊಲ­ಗಾವಲು (ಬದುವು ಕಾಲುವೆ) ಕಾಮಗಾರಿಯೂ ಕುಂಟುತ್ತಾ ಸಾಗಿದೆ. ಇದರಲ್ಲಿ 400 ಹೆಕ್ಟೇರ್‌ ಕಾಮಗಾರಿ ಪೂರ್ಣಗೊಂಡಿದೆ. 900 ಹೆಕ್ಟೇರ್‌್ ಬಾಕಿ ಉಳಿದಿದೆ. ಈ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಸಂಬಂಧಿಸಿದ ಇಲಾಖೆ ಕಾಲುವೆ ನಿರ್ಮಾಣ ಕಾಮಗಾರಿ ವಿಳಂಬ ಪ್ರಶ್ನಿಸಿ ಸಾಕಷ್ಟು ಬಾರಿ ನೋಟಿಸ್‌ ಜಾರಿಗೊಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ದುರದೃಷ್ಟಕರ.


‘ಟೆಂಡರ್‌ಗೆ ಆಹ್ವಾನ’
ಎರಡನೇ ಹಂತದ ಗ್ರಾಮಗಳಾದ ಮಾಳ­ವಾಡ, ಸೋಮನಕಟ್ಟಿ ವ್ಯಾಪ್ತಿಯಲ್ಲಿನ 11,­681 ಹೆಕ್ಟೇರ್‌್ ಪ್ರದೇಶದಲ್ಲಿ ನೀರಾವರಿ ಆರಂಭ­ಗೊಂಡಿದೆ. ಕಳೆದ ಆರು ವರ್ಷದಿಂದ ಇಲ್ಲಿನ ರೈತರು ಯೋಜನೆಯಡಿಯಲ್ಲಿ ನೀರು ಬಳಸಿಕೊಂಡು ನೀರಾವರಿ ಮೂಲಕ ಬೆಳೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಕೆಲ ಪ್ರಮುಖ ಹಾಗೂ ಉಪ ಕಾಲುವೆ, ಹೊಲ­ಗಾವಲು ಕಾಲುವೆ ನಿರ್ಮಾಣ ಕಾಮಗಾರಿ­ಗಳಲ್ಲಿ ವಿಳಂಬವಾಗಿವೆ. ₨ 65 ಕೋಟಿ ವೆಚ್ಚ­ದಲ್ಲಿ ಬಾಕಿ ಉಳಿದ ಕಾಮಗಾರಿಗೆ ಟೆಂಡರ್‌್ ಕರೆದು ಆದಷ್ಟು ಬೇಗ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಎಂ.ಬಿ.ಕೌದಿ, ಕಾರ್ಯನಿರ್ವಾಹಕ ಅಧಿಕಾರಿ
ಮಲಪ್ರಭಾ ಬಲದಂಡೆ ಯೋಜನೆಯ ರೋಣ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.