ADVERTISEMENT

ಮಹಿಳೆ ಸಾಂಸ್ಕೃತಿಕ ರಂಗದ ರಾಯಬಾರಿ

ಮಹಿಳಾ ದಿನಾಚರಣೆಯಲ್ಲಿ ಡಾ. ಅನ್ನದಾನೀಶ್ವರ ಶ್ರೀ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:35 IST
Last Updated 20 ಮಾರ್ಚ್ 2017, 6:35 IST

ಮುಂಡರಗಿ: ಮಹಿಳೆಯರು ಪರಂಪರೆ, ಆಚಾರ, ವಿಚಾರ ಮತ್ತಿತರ ದೇಶಿ ಸಂಸ್ಕೃತಿ ರಕ್ಷಿಸಿ, ಮುನ್ನಡೆಸಿಕೊಂಡು ಹೋಗುವ ಸಾಂಸ್ಕೃತಿಕ ರಾಯಬಾರಿಗಳು ಎಂದು ಡಾ. ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗವು ಭಾನುವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಹಿಳೆ ದೈಹಿಕವಾಗಿ ತುಂಬಾ ಮೃದು ಮತ್ತು ಸೂಕ್ಷ್ಮವಾಗಿದ್ದರೂ, ಆಂತರಿಕವಾಗಿ ಅವಳು ತುಂಬಾ ಬಲಿಷ್ಠವಾಗಿದ್ದಾಳೆ. ದಿನನಿತ್ಯ ತನ್ನ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುವುದರ ಜೊತೆಗೆ, ಸಮಾಜ ಸೇವೆಯಲ್ಲಿಯೂ ತನ್ನನ್ನು ಗುರುತಿಸಿಕೊಂಡಿದ್ದಾಳೆ ಎಂದು ತಿಳಿಸಿದರು.

ಶಿರಹಟ್ಟಿ ಪಿಯು ಕಾಲೇಜಿನ ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ ಮಾತನಾಡಿ, ಜಗತ್ತಿನ ಎಲ್ಲ ರಂಗಗಳಲ್ಲಿ ತಾರಮತ್ಯವಿದೆ. ಪುರುಷರು ಹಾಗೂ ಪುರುಷರ ಮಧ್ಯದಲ್ಲಿ ಹಾಗೂ ಮಹಿಳೆ ಮತ್ತು ಮಹಿಳೆಯರ ಮಧ್ಯದಲ್ಲಿ ಕಂದಕ ಗೋಚರಿಸುತ್ತದೆ. ಗಂಡು ಹೆಣ್ಣುಗಳು ತಮ್ಮ ನಡುವಿನ ಭೇದವನ್ನು ಬದಿಗೊತ್ತಿ ಎಲ್ಲರೂ ಸಮಾನವಾಗಿ ಬದುಕಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ತಿಳಿಸಿದರು.

ಬಿದರಳ್ಳಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕಿ ಭಾಗ್ಯಲಕ್ಷ್ಮಿ ಇನಾಮತಿ, 12ನೇ ಶತಮಾನದ ಅನುಭವ ಮಂಟಪದಲ್ಲಿ ಬಸವಾದಿ ಶರಣರು ಮಹಿಳೆಗೆ ಸಮಾನ ಸ್ಥಾನ ಮಾನ ನೀಡಿ ಗೌರವಿಸಿದ್ದರು. 

ಹೆಣ್ಣು– ಗಂಡು, ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಅಭಿಪ್ರಾಯ ಮಂಡಿಸಬಹುದಿತ್ತು. ಬಸವಣ್ಣನು ಬಾಳಿ ಹೋಗಿರುವ ನಮ್ಮ ನಾಡಿನಲ್ಲಿ ಈಗಲೂ ಕೆಲವು ಭಾಗಗಳಲ್ಲಿ ಮಹಿಳೆ ಮತ್ತು ಪುರುಷರ ನಡುವೆ ಅಸಮಾನತೆ ಮೂಡಿಸುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಜಗದ್ಗುರು ಅನ್ನದಾನೀಶ್ವರ ಅಕ್ಕನ ಬಳಗದ ಅಧ್ಯಕ್ಷೆ ಲಕ್ಷ್ಮಿದೇವಿ ಬೆಳವಟಗಿಮಠ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಲೀಲಾ ಅಕ್ಕೂರ, ದಾಕ್ಷಾಯಣಿ ಕಡ್ಡಿ, ಪುಷ್ಪಾ ಬೆಲ್ಲದ, ಉಮಾ ಕೊಪ್ಪಳ, ಮಂಗಲಾ ಮಠದ, ಲತಾ ಕಡ್ಡಿ, ರೇಖಾ ಹುಲ್ಲೂರ, ಪ್ರೇಮಾ ಹೊಸಮಠ, ಸರೋಜಾ ಸೇಡದಾಳೆ, ಸಂಗೀತಾ ಕೊರಡಕೇರಿ, ಜ್ಯೋತಿ ಜೋಷಿ, ದಾಕ್ಷಾಯಣಿ ಹಿರೇಮಠ, ಲತಾ ಲಿಂಬಿಕಾಯಿ, ಸುಜಾತಾ ಕೊರಡಕೇರಿ ಮೊದಲಾವರು ಹಾಜರಿದ್ದರು.
ಗೌರಮ್ಮ ಹುರಕಡ್ಲಿ ಮಿಮಿಕ್ರಿ ಹಾಗೂ ಚನ್ನಮ್ಮ ಚನ್ನಳ್ಳಿ ಏಕಪಾತ್ರಾಭಿನಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.