ADVERTISEMENT

‘ಮಾನವೀಯ ಮೌಲ್ಯಗಳಿಗೆ ಮನ್ನಣೆ ನೀಡಿ’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 6:21 IST
Last Updated 17 ಏಪ್ರಿಲ್ 2017, 6:21 IST

ಲಕ್ಷ್ಮೇಶ್ವರ: ಮದುವೆ ಆಡಂಬರಕ್ಕೆ ಎಡೆಮಾಡಿಕೊಡದೆ ಮಾನವ ಸಂಬಂಧ ಹಾಗೂ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವಂತಾಗಬೇಕು. ಮನುಷ್ಯನ ಜೀವನವು ನಾಲ್ಕು ವಿಧದ ಮೋಕ್ಷಗಳಿಂದ  ಪರಿಪೂರ್ಣಗೊಳ್ಳುತ್ತದೆ ಎಂದು ಶಿರಸಿ ಮತ್ತು ತೊಟ್ಟಿಲಕೇರಿ ಬಣ್ಣಮಠದ ಶಿವಲಿಂಗ ಸ್ವಾಮೀಜಿ ಹೇಳಿದರು.ಇಲ್ಲಿಗೆ ಸಮೀಪದ ಬಾಲೆಹೊಸೂರು ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸಾರಕ್ಕೆ ಸಂಸ್ಕಾರ ಕೊಡುವುದರಲ್ಲಿ ಜೀವನದ ಅರ್ಥ ಅಡಗಿದೆ. ಸತಿ ಪತಿಗಳು ಒಂದಾಗಿ ಸಂಸಾರದ ಬಂಡಿ ಸರಿಯಾಗಿ ಸಾಗುವಂತೆ ನೋಡಿಕೊಳ್ಳುವುದು ಇಬ್ಬರ ಜವಾಬ್ದಾರಿಯಾಗಿದೆ. ಉತ್ತಮ ನಾಗರಿಕನಾಗಿ ಬಾಳಿ ಬದುಕುವುದು ಸಂಸಾರದ ಸಾರ. ಹಿಂದೂ ಧರ್ಮದಲ್ಲಿ ಇರುವ ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮಕ್ಕೆ ವಿಶೇಷವಾದ ಗೌರವವಿದೆ. ಸಾಮೂಹಿಕ ಮದುವೆಗಳಲ್ಲಿ ಎಲ್ಲ ಜಾತಿ, ಧರ್ಮ, ಮತ ಪಂಥಗಳ ಜನರು ಭಾಗವಹಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದಂತಾಗುತ್ತದೆ ಎಂದರು.

ಅಗಡಿಯ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ವಿಶಿಷ್ಟ ಅರ್ಥವಿದೆ. ಗಂಡ ಹೆಂಡತಿ ಹೊಂದಿಕೊಂಡು ಸಾಗಿದಾಗ ಅಂಥ ಸಂಸಾರ ಸುಖ ಸಂಸಾರ ಆಗುತ್ತದೆ ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ನೀಡುವುದನ್ನು ಮತ್ತು ನಮ್ಮ ಆಚಾರ ವಿಚಾರಗಳನ್ನು ಬೆಳೆಸಬೇಕು ಎಂದು ಹೇಳಿದರು.

ADVERTISEMENT

ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಮಾತನಾಡಿದರು.  ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ,  ಸದಾಶಿವಪೇಟೆಯ ಗದಿಗೇಶ್ವರ ಸ್ವಾಮೀಜಿ, ಜಾರಕಿಹೊಳಿ ಸ್ವಾಮೀಜಿ, ಕೆರಕಲಕಟ್ಟಿ ಸ್ವಾಮೀಜಿ, ಸಂಶಿಯ ಮಹಾಲಿಂಗೇಶ್ವರ ಸ್ವಾಮೀಜಿ, ತಾಲ್ಲೂಕು ಪಂಚಾಯ್ತಿ ಸದಸ್ಯ ನಿಂಗಪ್ಪ ಜಾಲವಾಡಗಿ, ವಿರುಪಾಕ್ಷಪ್ಪ ಕಾರಡಗಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಸೂರಣಗಿ, ಅಶೋಕ ಮಾಗಿ, ಶಿವಣ್ಣ ಕಬ್ಬೇರ, ಬಸವರೆಡ್ಡಿ ಹನಮರೆಡ್ಡಿ, ಫಕ್ಕಿರೇಶ ಮ್ಯಾಟಣ್ಣವರ, ಮುತ್ತಣ್ಣ ಗುಳೇದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.