ADVERTISEMENT

‘ರೈತರು ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಲಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:24 IST
Last Updated 22 ನವೆಂಬರ್ 2017, 7:24 IST

ನರಗುಂದ: ‘ಮಹದಾಯಿ ಸಮಸ್ಯೆ ಇತ್ಯರ್ಥಪಡಿಸಲು ಯಾರಿಂದಲೂ ಗಂಭೀರ ಚಿಂತನೆ ನಡೆಯುತ್ತಿಲ್ಲ. ಎಲ್ಲ ಪಕ್ಷಗಳು ಭರವಸೆ ಮಾತ್ರ ನೀಡುತ್ತಿವೆ. ಡಿ. 15ರವರೆಗೆ ಕಾದು ನೋಡುತ್ತೇವೆ. ಇಲ್ಲವಾದರೆ ನಮ್ಮ ಹೋರಾಟದ ಶಕ್ತಿ ತೋರಿಸುತ್ತೇವೆ. ರೈತರು ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಬೇಕು’ ಎಂದು ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 860ನೇ ದಿನ ಮಂಗಳವಾರ ಅವರು ಮಾತನಾಡಿದರು. ‘ಜನಪ್ರತಿನಿಧಿಗಳು ಮತ್ತು ಪಕ್ಷಗಳ ಮೇಲಿನ ನಂಬಿಕೆ ಹೋಗಿದೆ. ಇನ್ನು ನಿಮ್ಮ ಆಟ ನಡೆಯದು. ನುಡಿದಂತೆ ನಡೆಯಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಬೇಕು’ ಎಂದು ಅವರು ಎಚ್ಚರಿಕೆ ನೀಡಿದರು.

‘ಗೋವಾ ಕರ್ನಾಟಕದ ಬಗ್ಗೆ ಇರುವ ಕಠಿಣ ನಿಲುವು ಸಡಿಲಿಸಬೇಕು. ರೈತರ ಹಿತ ಬಯಸಬೇಕು. ಮಹದಾಯಿ ವಿಷಯದಲ್ಲಿ ಪ್ರಧಾನಿ ಮೌನ ಸಲ್ಲದು. ರಾಜ್ಯದ ಬಿಜೆಪಿ ಮುಖಂಡರು ಅವರಿಗೆ ವಾಸ್ತವ ಪರಿಸ್ಥಿತಿ ಮನದಟ್ಟು ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ರಾಜಕೀಯ ಪಕ್ಷಗಳು ಒಂದಾಗಿ ರೈತರ ಜೀವನಾಡಿ ಮಹದಾಯಿಗೆ ಒಲವು ತೋರಬೇಕು. ರೈತರು ಸಹಿತ ತಮ್ಮ ರಾಜಕೀಯ ನಿಲುವು ಬಿಟ್ಟು ಮಹದಾಯಿಗೆ ಕೈ ಜೋಡಿಸಬೇಕು’ ಎಂದು ಹೋರಾಟ ಸಮಿತಿ ಸದಸ್ಯ ರಮೇಶ ನಾಯ್ಕರ ಅಭಿಪ್ರಾಯಪಟ್ಟರು. ಎಸ್‌.ಬಿ.ಜೋಗಣ್ಣವರ, ವೀರಣ್ಣ ಸೊಪ್ಪಿನ, ಸೋಮಲಿಂಗಪ್ಪ ಆಯಟ್ಟಿ, ವೆಂಕಪ್ಪ ಹುಜರತ್ತಿ, ಹನಮಂತ ಪಡೆಸೂರ, ಹುಲಜೋಗಿ, ಯಲ್ಲಪ್ಪ ಗುಡದೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.