ADVERTISEMENT

‘ರೈತರ ಬದುಕು, ಬರಗಾಲದ ಅಳಲು’

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 5:47 IST
Last Updated 17 ಏಪ್ರಿಲ್ 2017, 5:47 IST

ನರಗುಂದ; ’ನೀರು ಬೇಕಿದೆ, ನೀರು ಕೊಡದವರ ನೀರಳಿಸಬೇಕಿದೆ... ರೈತರು ಜಾಗೃತಗೊಳ್ಳದ ಹೊರತು... ನೀರು ಸಿಗದಾಗಿದೆ.. ಎಂಬ ಶಿಕ್ಷಕ ಎಸ್‌.ಜಿ. ಮಣ್ಣೂರಮಠರ ಕವನದ ಸಾಲುಗಳು ರೈತರ ಸಂಕಷ್ಟ, ಸ್ಪಂದಿಸದ ರಾಜಕಾರಣಿಗಳ ಮನಸ್ಥಿತಿ ಅನಾವರಣಗೊಳಿಸಿ ನಾಲ್ಕನೇ ತಾಲ್ಲೂಕು ಸಮ್ಮೇಳನದ ಕವಿಗೋಷ್ಠಿಯಲ್ಲಿ ಪ್ರೇಕ್ಷಕರ ಮನಸೆಳೆದವು.

ಕಲ್ಲಪ್ಪ ಸವದಿ  ಹಾಡಿನ ಮೂಲಕ ’ಮಹಾದಾಯಿ’ ಕವನ ವಾಚಿಸಿ ಎರಡು ವರ್ಷದ ಹೋರಾಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಾಗ  ರೈತರ  ಬಗ್ಗೆ ಎಲ್ಲರೂ ಮರುಕಪಟ್ಟಿದ್ದು ಕಂಡು ಬಂತು.ರಮೇಶ ಐನಾಪೂರ ಅವರ ‘ಕುರುಡು ಸರ್ಕಾರ’ ಕವನ ಸರ್ಕಾರಗಳ ವಾಸ್ತವ ಸ್ಥಿತಿ ಬಿಚ್ಚಿಟ್ಟು ಅದರ ಸಂಚು ಹೇಗಿರುತ್ತದೆ ತಿಳಿಸಿದಾಗ ಪ್ರೇಕ್ಷಕರು ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ  ದೃಶ್ಯ ಗೋಚರಿಸಿತು. ’ಬರ, ಚಾಟಿ’ ಕವನ ವಾಚಿಸಿದ ಬಸವರಾಜ ಹಲಕುರ್ಕಿ ಬರದ ಹೆಸರಿನಲ್ಲಿ ಹಣ ಲಪಟಾಯಿಸುತ್ತಿರುವ ರಾಜಕಾರಣಿಗಳ ಭ್ರಷ್ಟಾಚಾರ ಅನಾವರಣಗೊಳಿಸಿದರು.

ಭುವನೇಶ್ವರಿ ಕ್ಯಾಮನಗೌಡ್ರರವರ ’ಬರ’ ಕವನ ಬರಗಾಲಕ್ಕೆ ಸಿಕ್ಕ ರೈತನ ದುಃಸ್ಥಿತಿ ಬಿಚ್ಚಿಟ್ಟರೆ, ನೀಲಕಂಠ ಮಡಿವಾಳರವರ  ’ರೈತನಿಗಿಲ್ಲ   ಉಳಿಗಾಲ’ ಕವನ ರೈತರ ಸಂಕಷ್ಟ ತಿಳಿಸಿ ವೀಕ್ಷಕರ ಮೆಚ್ಚುಗೆ ಗಳಿಸಿತು. ಬಿ.ಸಿ. ಹನಮಂತಗೌಡ್ರ ಅವರ ‘ರೈತಣ್ಣ’ ಬಾಪುಗೌಡ ತಿಮ್ಮನಗೌಡ್ರ, ಎಂ.ಡಿ. ಮಾದರವರ ಮಹಾದಾಯಿ ಕುರಿತಾದ ಕವನಗಳು ವಾಸ್ತವ ಹೋರಾಟ ತಿಳಿಸಿದವು. ಕಲಾಶ್ರೀ ಹಾದಿಮನಿಯವರ ‘ಅಂತರಂಗ‘ ಬಿ.ಎಚ್‌. ಕ್ಯಾರಕೊಪ್ಪ ಅವರ  ‘ಸೃಷ್ಟಿ’, ಎಫ್‌.ಎಂ. ಹಾಡಕಾರವರ ‘ನಿನ್ನ ನೀ ಅರಿಯಲು’ ಎಚ್‌.ಬಿ. ಅಸೂಟಿ ಅವರ ‘ಅಜ್ಞಾನ’,  ಎಚ್‌.ಬಿ. ತಳವಾರ ಅವರ ‘ಕೋಗಿಲೆ’, ಶಿವಪ್ಪ ಯಲಿಗಾರ ಅವರ ‘ಹೆಣ್ಣು’ ಶಿವಾನಂದ ಜೋಗಿಯವರ ಮಹಾದಾಯಿ ಕವನಗಳು ಗ್ರಾಮಸ್ಥರ ಮನ ಸೆಳೆದು ಕವಿಗೋಷ್ಠಿಗೆ ಕಳೆ ತುಂಬಿದವು.

ADVERTISEMENT

ಆಶಯ ನುಡಿಯನ್ನಾಡಿದ  ಮುಕ್ತಾ ಗುಜಮಾಗಡಿ ಕವಿಗಳಿಗೆ ಪ್ರೋತ್ಸಾಹ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ರುದ್ರನಾಥ ಕಲ್ಯಾಣಶೆಟ್ಟಿ ಕವಿಗಳು ಸಾಹಿತ್ಯದ ಅಧ್ಯಯನ ಹಾಗೂ ವಿವಿಧ ಕವಿಗಳ ಕಾವ್ಯ ಓದಿ ಉತ್ತಮ ಕವಿಗಳಾಗುವಂತೆ ಸಲಹೆ ಮಾಡಿದರು,ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ  ಎಸ್‌.ಬಿ.ಕುಷ್ಟಗಿ, ಕಸಾಪ ಅಧ್ಯಕ್ಷ ಎಂ.ಎಂ.ಕಲಹಾಳ, ಬಸನಾಯಕ ಕೊಳ್ಳಿಯವರ, ದ್ಯಾವನಗೌಡ ರಾಯನಗೌಡ್ರ, ವಿ.ಎನ್‌. ಬೋಸ್ಲೆ ಮತ್ತಿತರರು ಭಾಗವಹಿಸಿದ್ದರು.ಬಿ.ಆರ್‌. ಪಟ್ಟಣಶೆಟ್ಟಿ ಸ್ವಾಗತಿಸಿದರು, ಎಫ್‌.ಬಿ. ಧರಿಯಣ್ಣವರ ನಿರೂಪಿಸಿದರು. ಎ.ಎಲ್‌. ಮೇಳನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.