ADVERTISEMENT

ಶಿರಹಟ್ಟಿ, ಗದಗ, ನರಗುಂದದಲ್ಲಿ ಪರಿವರ್ತನಾ ಯಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 9:09 IST
Last Updated 22 ಡಿಸೆಂಬರ್ 2017, 9:09 IST
ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಗದುಗಿನ ಎ.ಪಿ.ಎಂ.ಸಿ ಆವರಣದ ಸಮೀಪ ರಸ್ತೆಯಲ್ಲಿ ರಾರಾಜಿಸುತ್ತಿರುವ ಬಿಜೆಪಿ ಮುಖಂಡರ ಕಟೌಟ್‌ಗಳು
ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಗದುಗಿನ ಎ.ಪಿ.ಎಂ.ಸಿ ಆವರಣದ ಸಮೀಪ ರಸ್ತೆಯಲ್ಲಿ ರಾರಾಜಿಸುತ್ತಿರುವ ಬಿಜೆಪಿ ಮುಖಂಡರ ಕಟೌಟ್‌ಗಳು   

ಗದಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ಮಾಳಗೊಂಡ ಸೊಸೈಟಿ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಲಿದೆ.

ಎ.ಪಿ.ಎಂ.ಸಿ ಆವರಣ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಬಿಜೆಪಿ ನಾಯಕರ ಬ್ಯಾನರ್‌, ಪ್ಲೆಕ್ಸ್‌, ಕಟೌಟ್‌ಗಳು ರಾರಾಜಿಸುತ್ತಿವೆ. ಅಂದಾಜು 20 ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯವೇದಿಕೆ ಬಳಿ ಸಾರ್ವಜನಿಕರಿಗೆ ಕುಳಿತುಕೊಳ್ಳಲು 10 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.

ಸಮಾವೇಶದ ಸಿದ್ಧತೆಯನ್ನು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ನೇತೃತ್ವದ ತಂಡ ಗುರುವಾರ ಪರಿಶೀಲಿಸಿತು. ಸಮಾವೇಶಕ್ಕೂ ಮುನ್ನ ಮಧ್ಯಾಹ್ನ 1 ಗಂಟೆಗೆ ನಗರದ ಮುಳಗುಂದ ರಸ್ತೆಯ ಅಂಬಾ ಭವಾನಿ ದೇವಸ್ಥಾನದ ಆವರಣದಿಂದ ಬೈಕ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ.

ADVERTISEMENT

ಜಾಥಾ ಮುಳಗುಂದನಾಕಾ, ರಾಚೋಟೇಶ್ವರ ದೇವಸ್ಥಾನ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭೂಮರಡ್ಡಿ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ಸಿ.ಟಿ.ರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಭಾಗವಹಿಸುವರು.

‘ಯಾತ್ರೆಯಲ್ಲಿ ಭಾಗವಹಿಸಲು ಬರುವ ಬಿಜೆಪಿಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರನ್ನು ಭೂಮರೆಡ್ಡಿ ವೃತ್ತದಿಂದ ಮಾಳಗೊಂಡ ಸೊಸೈಟಿ ಆವರಣದವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು’ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.

ವೇದಿಕೆ ಸಿದ್ಧತೆ ಪರಿಶೀಲನೆ ವೇಳೆ ನಗರ ಬಿಜೆಪಿ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಎಂ.ಎಸ್. ಕರಿಗೌಡ್ರ, ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಶ್ರೀನಿವಾಸ ಹುಬ್ಬಳ್ಳಿ, ಭದ್ರೇಶ ಕುಸ್ಲಾಪುರ, ಸಿದ್ದು ಪಲ್ಲೇದ, ವಿನಾಯಕ ಹಬೀಬ್, ಪ್ರಶಾಂತ ನಾಯ್ಕರ, ಸಂಗಮೇಶ ದುಂದೂರ ಇದ್ದರು.

ನರಗುಂದ: 30 ಸಾವಿರ ಜನ ಸೇರುವ ನಿರೀಕ್ಷೆ
ನರಗುಂದ: ಪಟ್ಟಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ನಡೆಯುವ ಪರಿವರ್ತನಾ ಯಾತ್ರೆ ಸಭೆಯಲ್ಲಿ 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕಳೆದ ಒಂದು ವಾರದಿಂದ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 15 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಮಾವೇಶದಲ್ಲಿ ಭಾಗವಹಿಸುವ ಎಲ್ಲರಿಗೂ ಭೋಜನ ವ್ಯವಸ್ಥೆ ಇರುವುದಾಗಿ ಸ್ಥಳೀಯ ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಸಿ.ಪಾಟೀಲ ಅವರು ಗುರುವಾರ ಸಿದ್ಧತೆ ಪರಿಶೀಲಿಸಿದರು.

‘ಗದುಗಿನಲ್ಲಿ ಸಮಾವೇಶ ಮುಗಿಸಿಕೊಂಡು ಬಿ.ಎಸ್‌. ಯಡಿಯೂರಪ್ಪ ಅವರು ಇಲ್ಲಿನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದು ಸಿ.ಸಿ.ಪಾಟೀಲ ಹೇಳಿದರು. ಚಂದ್ರು ದಂಡಿನ, ಪ್ರಕಾಶ ಪಟ್ಟಣಶೆಟ್ಟಿ, ಎನ್‌.ವಿ.ಮೇಟಿ, ಚಂದ್ರು ಪವಾರ, ಅಜ್ಜು ಪಾಟೀಲ ಇದ್ದರು.

ಸಮಾವೇಶಕ್ಕೆ ಸಿದ್ಧಗೊಂಡ ಶಿರಹಟ್ಟಿ

ಶಿರಹಟ್ಟಿ: ಬಿಜೆಪಿ ಪರಿವರ್ತನಾ ಯಾತ್ರೆ ಸ್ವಾಗತಿಸಲು ಶಿರಹಟ್ಟಿ ಪಟ್ಟಣ ಸಿದ್ದಗೊಂಡಿದೆ. ಎಲ್ಲಿ ನೋಡಿದರೂ ಬಿಜೆಪಿ ಮುಖಂಡರ ಬ್ಯಾನರ್‌ಗಳು, ಕಟೌಟ್‌ಗಳು ಕಣ್ಣಿಗೆ ರಾಚುತ್ತಿವೆ. ಡಿ. 22ರಂದು ಇಲ್ಲಿನ ಎಫ್.ಎಂ. ಡಬಾಲಿ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಾರ್ವಜನಿಕರಿಗಾಗಿ 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ನಿಲುಗಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾರ್ಯಕರ್ತರು ಗುರುವಾರ ಸಂಜೆ ಇದರ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರು. ತಾಲ್ಲೂಕಿನ ರಾಮಗಿರಿಯಿಂದ ಬಿ.ಎಸ್. ಯಡಿಯೂರಪ್ಪ ಲಕ್ಷ್ಮೇಶ್ವರ, ಗೊಜನೂರ, ಮಾಗಡಿ ಮೂಲಕ ಶಿರಹಟ್ಟಿ ಪಟ್ಟಣಕ್ಕೆ ಬರಲಿದ್ದಾರೆ. ಮಾಜಿ ಶಾಸಕ ರಾಮಣ್ಣ ಲಮಾಣಿ, ವಿರೂಪಾಕ್ಷಗೌಡ ಅಣ್ಣಿಗೇರಿ, ಭೀಮಸಿಂಗ್ ರಾಠೋಡ, ರಾಮಣ್ಣ ಲಮಾಣಿ (ಶಿಗ್ಲಿ), ವಿಶ್ವನಾಥ ಕಪ್ಪತ್ತನವರ, ಅನಿಲ ಮಾನೆ, ರಾಮಣ್ಣ ಡಂಬಳ, ತಿಮ್ಮರಡ್ಡಿ ಮರಡ್ಡಿ ಸಿದ್ಧತೆ ಪರಿಶೀಲಿಸಿದರು.

* * 

ಇವೆಲ್ಲವೂ ಚುನಾವಣಾ ತಂತ್ರ. ರಾಜಕೀಯ ಮುಖಂಡರ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಡಿ. 22ರಂದು ಬೆಂಗಳೂರು ಚಲೋ ನಡೆಸುವುದು ನಿಶ್ಚಿತ
ವೀರೇಶ ಸೊಬರದಮಠ
ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.