ADVERTISEMENT

ಶಿರೋಳ ಸಂಪೂರ್ಣ ಡಿಜಿಟಲ್ ಗ್ರಾಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 6:53 IST
Last Updated 11 ಜನವರಿ 2017, 6:53 IST

ಗದಗ: ನಗದು ರಹಿತ ವ್ಯವಹಾರದಿಂದ ಜನರಿಗೆ ಸಾಕಷ್ಟು ಅನುಕೂಲತೆಗಳಿವೆ. ಗ್ರಾಮದ ಪ್ರತಿಯೊಬ್ಬರು ನಗದು ರಹಿತ ವ್ಯವಹಾರ ಮಾಡಲು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಂಜುನಾಥ ಚವ್ಹಾಣ ಹೇಳಿದರು.

ತಾಲ್ಲೂಕಿನ ಯಲಿಶಿರೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೋಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ      ಕಚೇರಿ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ‘ಶಿರೋಳ ಗ್ರಾಮ ಸಂಪೂರ್ಣ ಡಿಜಿಟಲ್ ಗ್ರಾಮ’ ಎನ್ನುವ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ನೋಟು ಮುದ್ರಿಸಲು ಸಾಕಷ್ಟು ವೆಚ್ಚವಾಗುತ್ತಿದೆ. ಆದರೆ, ನಗದು ರಹಿತ ವ್ಯವಹಾರದಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗುತ್ತವೆ. ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕ್‌ಗೆ ಅಲೆಯುವುದು ತಪ್ಪುತ್ತದೆ ಎಂದರು.

ಗ್ರಾಮದಲ್ಲಿ ಎಲ್ಲ ಕುಟುಂಬಗಳು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗಲು   ಪ್ರತಿಯೊಬ್ಬರ ಸಹಕಾರ ತುಂಬ ಅಗತ್ಯವಾಗಿದೆ. ಪ್ರಧಾನಿ ಕನಸು ನನಸು ಮಾಡಬೇಕು ಎಂದು ತಿಳಿಸಿದರು.

ಬ್ಯಾಂಕ್‌ ವ್ಯವಸ್ಥಾಪಕ ಬಾಲಕಿಶನ್ ದಾಸರಿ ಮಾತನಾಡಿ, ಮುಂದಿನ ದಿನಮಾನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ನಗದು ರಹಿತ ವ್ಯವಹಾರ ಆರಂಭಿಸಬೇಕು ಎಂದರು.
ನಗದು ರಹಿತ ವ್ಯವಹಾರದಿಂದ ಜನರ ಮನೆ ಬಾಗಿಲಿಗೆ ಬ್ಯಾಂಕ್ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಿಲ್ಲೆಯ ಜನರ ಜೀವನಾಡಿಯಾಗಿ ಬ್ಯಾಂಕ್ ಕೆಲಸ ಮಾಡಬೇಕು.

ಮೊಬೈಲ್ ಬ್ಯಾಂಕಿಂಗ್, ರೂಪೆ ಕಾರ್ಡ್‌ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುವುದು ಎಂದು ಪ್ರಾದೇಶಿಕ ವ್ಯವಸ್ಥಾಪಕ ಶೇಖರ ಶೆಟ್ಟಿ ಹೇಳಿದರು.
ಕೆವಿಜಿ ಬ್ಯಾಂಕ್ 11 ಶಾಖೆಗಳಿಂದ 11 ಸಿಬ್ಬಂದಿಗೆ ಲ್ಯಾಪ್‌ಟಾಪ್ ನೀಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮೀ ಪಾಟೀಲ, ಗದಗ ಶಾಖೆಯ ವ್ಯವಸ್ಥಾಪಕ ಎನ್.ಶ್ರೀಧರ, ಎನ್.ಕೆ.ಗ್ರಾಮಪುರೋಹಿತ, ಸಿದ್ದನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.