ADVERTISEMENT

ಶೇಂಗಾ ಖರೀದಿ ಟೆಂಡರ್ ವಿಳಂಬ

ಎಪಿಎಂಸಿ ಅಧಿಕಾರಿಗಳು, ಖರೀದಿದಾರರು, ದಲ್ಲಾಳಿಗಳ ಹಗ್ಗಜಗ್ಗಾಟ; ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:46 IST
Last Updated 4 ಮಾರ್ಚ್ 2017, 6:46 IST

ಗಜೇಂದ್ರಗಡ: ದಲ್ಲಾಳಿಗಳು ಮತ್ತು ಖರೀದಿದಾರರು ಕೃಷಿ ಉತ್ಪನ್ನಗಳನ್ನು ಬಿಲ್ ಪ್ರಕಾರ ಖರಿದೀಸಬೇಕು ಎಂಬ ಫರ್ಮಾನನ್ನು ಎಪಿಎಂಸಿ ಅಧಿಕಾರಿಗಳು ಹೊರಡಿಸಿದ ಪರಿಣಾಮ ಶುಕ್ರವಾರ ಪೇಟೆಗೆ ತಂದ ತಮ್ಮ ಮಾಲು ಖರೀದಿ ಸಲು ಖರೀದಿದಾರರು ಟೆಂಡರ್ ಹಾಕದ ಕಾರಣ ಇಲ್ಲಿನ ಎಪಿಎಂಸಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು.

ಇಲ್ಲಿನ ಎಪಿಎಂಸಿಯಲ್ಲಿ ಇಂದು ಬೆಳಿಗ್ಗೆ ರೈತರು ತಮ್ಮ ಮಾಲುಗಳನ್ನು ಮಾರಲು ತಂದಿದ್ದರು. ಆದರೆ ಎಪಿಎಂಸಿ ಅಧಿಕಾರಿಗಳು ರೈತರ ಮಾಲನ್ನು ಬಿಲ್ ಪ್ರಕಾರ ಮಾರಬೇಕು ಎಂದು ದಲ್ಲಾಳಿ ಗಳಿಗೆ ತಾಕೀತು ಮಾಡಿದ್ದರು. ಬಿಲ್ ಪ್ರಕಾರ ಮಾರಿದರೆ ರೈತರಿಗೆ ಸರಿಯಾದ ಬೆಲೆ ಸಿಗಲಾರದು ಎಂಬ ಕಾರಣವನ್ನು ದಲ್ಲಾಳಿಗಳು ಮತ್ತು ಖರೀದಿದಾರರು ನೀಡುತ್ತಿದ್ದರು. ಇದರಿಂದ ಖರೀದಿದಾ ರರು ಮಧ್ಯಾಹ್ನ 3 ಗಂಟೆಯಾದರೂ ರೈತರ ಮಾಲಿಗೆ ಟೆಂಡರ್ ಹಾಕಲಿಲ್ಲ. ಇದರಿಂದ ರೈತರು ಆಕ್ರೋಶಗೊಂಡರು.

ನಂತರ ಎಪಿಎಂಸಿ ಕಚೇರಿಗೆ ಧಾವಿ ಸಿದ ರೈತರು ಎಪಿಎಂಸಿ ಅಧಿಕಾರಿ ಎ.ಎಂ. ಅಣ್ಣಿಗೇರಿ ಅವರನ್ನು ತರಾಟೆಗೆ ತೆಗೆದು ಕೊಂಡು  ಟೆಂಡರ್ ಹಾಕಲಾರದ ಕುರಿತು ವಿವರಣೆ ಕೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಣ್ಣಿಗೇರಿ, ‘ರೈತರು ಯಾರದ್ದೋ ಮಾತಿಗೆ ಕಿವಿ ಗೊಡಬಾರದು. ಇದರಲ್ಲಿ ರೈತರ ಹಿತ ಅಡಗಿದೆ. ರೈತರ ಮಾಲಿನ ಸ್ಯಾಂಪಲ್, ತೂಕದ ನ್ಯೂನತೆ, ಸರಿಯಾದ ಬಿಲ್ ಇಲ್ಲದೇ ರೈತರನ್ನು ಕೆಲವರು ವಂಚಿಸು ತ್ತಿದ್ದಾರೆ. ಈ ಕಾರಣದಿಂದ ರೈತರಿಗೆ ಅನುಕೂಲ ಮಾಡಲು ಬಿಲ್ ಪ್ರಕಾರ ವ್ಯವಹರಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.

ಕಾಲಕಾಲೇಶ್ವರದ ರೈತ ಕಳಕಪ್ಪ ಹೂಗಾರ ಮಾತನಾಡಿ, ‘ಬೆಳಿಗ್ಗೆಯಿಂದ ನಾವು ನಮ್ಮ ಮಾಲನ್ನು ಸುರಿದಿದ್ದು ಈಗ ಟೆಂಡರ್ ಹಾಕದೇ ಇರುವುದರಿಂದ ಕಣ್ಣಿರು ಸುರಿಸುತ್ತಿದ್ದೇವೆ. ಇದಕ್ಕೆ ಯಾರು ಹೊಣೆ?, ಅಧಿಕಾರಿಗಳು, ದಲಾಲರು ಮತ್ತು ಖರೀದಿದಾರರ ನಡುವೆ ನಾವು ಸಾಯುತ್ತಿದ್ದೇವೆ. ಎಲ್ಲರೂ ನಿಮ್ಮ ನಿಮ್ಮ ಲಾಭದ ಹಾದಿ ನೋಡಿದರೆ ನಮ್ಮ ಗತಿ ಏನು? ಈ ವಿಷಯ ಗೊತ್ತಿದ್ದರೆ ನಾವು ಮಾಲನ್ನೆ ತರುತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಮೇಲಧಿಕಾರಿಗಳನ್ನು ಸಂಪರ್ಕಿಸಿ ಟೆಂಡರ ಆರಂಭಿಸಲಾಯಿತು. ‘ಮೊದಲೇ ತಡವಾಗಿ ಟೆಂಡರ್ ಆರಂಭವಾಗಿದೆ ಬೇಕಾಬಿಟ್ಟಿಯಾಗಿ ಟೆಂಡರ್ ಹಾಕಿದರೆ ಯಾರು ಹೊಣೆ ?’ಎಂದು ಕೆಲವು ರೈತರು ಆಕ್ಷೇಪಿಸಿದರು. ರೈತರಿಗೆ ತೊಂದರೆ ಆಗ ದಂತೆ ನಿಗಾವಹಿಸುವ ಭರವಸೆಯನ್ನು ಎಪಿಎಂಸಿ ಅಧಿಕಾರಿಗಳು ನೀಡಿದರು. ರೈತರು ಘಟನೆಯಿಂದ ಗಲಿಬಿಲಿಗೊಂಡಿ ದ್ದರು. ಎಪಿಎಂಸಿ ಆವರಣದಲ್ಲಿ ಅಲ್ಲಲ್ಲಿ ನಿಂತ ರೈತರು ಚರ್ಚೆ ನಡೆಸಿದ್ದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ಎಪಿ ಎಂಸಿ ಅಧ್ಯಕ್ಷ ವೀರಣ್ಣ ಶೆಟ್ಟರ, ‘ನಾನು ರೈತರ ಹಿತ ಕಾಯಲೆಂದೇ ಅಧಿಕಾರಕ್ಕೆ ಬಂದಿರುವೆ. ಅವರಿಗೆ ಅನ್ಯಾಯವಾದರೆ ಸಹಿಸಲಾರೆ. ಬದಲಾವಣೆ ತರಲು ಬಿಗಿ ಕ್ರಮ ಕೈಗೊಳ್ಳಲಾಗಿದೆ. ಮಧ್ಯವರ್ತಿಗಳು, ಖರೀದಿದಾರರು ಇವರ ನಡುವೆ ರೈತರು ಎಂದಿಗೂ ಬಲಿಯಾಗಬಾರದು. 

ದಲಾಲ ರಿಗೆ ಬಿಲ್ ಪ್ರಕಾರ ವ್ಯವಹರಿಸಲು ಮೆಮೋ ಕೊಡಲಾಗಿದೆ. ನಮಗೆ ರೈತರ ಹಿತ ಮುಖ್ಯ. ಅದಕ್ಕೆ ಎಲ್ಲರೂ ಸ್ಪಂದಿಸ ಬೇಕು. ನಾನು ಯಾರ ಮರ್ಜಿಗೂ ಒಳ ಗಾಗಲಾರೆ. ಒಂದೆರಡು ದಿನ ತೊಂದರೆ ಆದರೂ ಇದು ರೈತ ಪರವಾದ ಕ್ರಮ’ ಎಂದು ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT