ADVERTISEMENT

ಶ್ರಾವಣ ಸಂಭ್ರಮಕ್ಕೆ ಬೆಲೆ ಇಳಿಕೆ ಖುಷಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 6:27 IST
Last Updated 27 ಜುಲೈ 2017, 6:27 IST

ಗದಗ: ಶ್ರಾವಣ ಮಾಸದ ಆರಂಭ­ದೊಂದಿಗೆ ತರಕಾರಿಗಳ  ಹಾಗೂ ದಿನಸಿ ವಸ್ತುಗಳ ಬೆಲೆ ಇಳಿಕೆ ಆಗಿರುವುದರಿಂದ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬದ ಖಷಿ ಹೆಚ್ಚಿದೆ.
ಕಳೆದ ಒಂದು ತಿಂಗಳಿಂದ ಕೆ.ಜಿಗೆ ಸರಾಸರಿ ₹70 ತಲುಪಿದ್ದ ಟೊಮೊಟೊ ಬೆಲೆಯು ದಿಢೀರನೆ ₹40 ಕುಸಿದಿದ್ದು ₹30ರ ಆಸುಪಾಸಿಗೆ ಇಳಿದಿದೆ. ಹೀರೇಕಾಯಿ, ಗಜ್ಜರಿ, ಬೆಂಡೆಕಾಯಿ, ಹಸಿ­ಮೆಣ­ಸಿ­ನಕಾಯಿ, ಬದನೆ ಸೇರಿದಂತೆ ಬಹುತೇಕ ಎಲ್ಲ ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿದೆ.

ಹಬ್ಬದ ಖರೀದಿ ಹಿನ್ನೆಲೆಯಲ್ಲಿ ಬುಧವಾರ ಗದುಗಿನ ಗ್ರೇನ್‌ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರ ದಟ್ಟಣೆ ಕಂಡುಬಂತು. ನಾಗರ ಪಂಚಮಿ ಯೊಂದಿಗೆ ಹಬ್ಬಗಳ ಸರಣಿ ಪ್ರಾರಂಭ ಆಗುತ್ತದೆ. ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಉತ್ತರ ಕರ್ನಾಟಕದ ರೈತ ಸಮೂಹದ ಪಾಲಿಗೆ ನಾಗರ ಪಂಚಮಿ ಮಹತ್ವದ ಹಬ್ಬ. ಪಂಚಮಿ ಹೊತ್ತಿಗೆ ಮುಂಗಾರು ಹಂಗಾಮಿನ ಬೆಳೆಗಳು ಸಮೃದ್ಧವಾಗಿ ಬೆಳೆದು, ಕಣ್ಣು ಹಾಯಿಸಿದ ಕಡೆಗೆಲ್ಲಾ ಹಸಿರು ತುಂಬಿರು ತ್ತಿತ್ತು. ಆದರೆ ಸತತ ಬರ ಮತ್ತು ಮಳೆ ಕೊರತೆ ಹಬ್ಬದ ಸಂಭ್ರಮಕ್ಕೆ ಬರದ ಕಾರ್ಮೋಡ ಕವಿಯುವಂತೆ ಮಾಡಿದೆ.

‘ಮಳೆ ಕೊರತೆಯಿಂದಾಗಿ ಮುಂಗಾರು ಬಿತ್ತನೆಗೆ ಖರೀದಿಸಿದ ಬೀಜವನ್ನೇ ಮಾರಾಟ ಮಾಡಿ, ಹಬ್ಬ ಆಚರಿಸಬೇಕಾದ ಪರಿಸ್ಥಿತಿ ಬಂದಿದೆ. ಮಣ್ಣಿನ ಮಗ ಎಂದು ಕರೆಯಿಸಿಕೊಳ್ಳುವ ರೈತನ ಪರಿಸ್ಥಿತಿ ಈ ಹಂತಕ್ಕೆ ಬಂದಿದೆ’ ಎಂದು ಗದಗ ಎಪಿಎಂಸಿ ಮಾರುಕಟ್ಟೆಗೆ ಕೃಷಿ ಉತ್ಪನ್ನಗಳನ್ನು ತಂದಿದ್ದ  ರೈತರು ತೀವ್ರ ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೂರು ದಿನಗಳ ಹಬ್ಬ: ಮೊದಲನೆಯ ದಿನ ನಾಗರ ಅಮಾವಾಸ್ಯೆ ಅಂದರೆ ರೊಟ್ಟಿ ಪಂಚಮಿ. ರೊಟ್ಟಿ ಬಡಿಯುವ ಪಟ ಪಟ ಸದ್ದು ಎಲ್ಲರ ಮನೆಯಿಂದ ಕೇಳಿಸತೊಡಗಿದರೆ ರೊಟ್ಟಿ ಪಂಚಮಿ ಸಮೀಪಿಸಿದೆ ಎಂದರ್ಥ. ಎರಡನೆಯ ದಿನ ನಾಗಚೌತಿ, ಮೂರನೆ ದಿನ ನಾಗರ ಪಂಚಮಿ. ರೊಟ್ಟಿ ಪಂಚಮಿ ದಿನ ಹೆಣ್ಣುಮಕ್ಕಳು  ತಮ್ಮ ಸಮಸ್ತ ಬಳಗದೊಂದಿಗೆ ಹಣತೆ ಪೂಜೆ ಮಾಡುವುದುಂಟು. ದೀಪವಿರುವ ಮನೆಗೆ  ಅಷ್ಟಲಕ್ಷ್ಮಿಯರು ಬಂದು ನೆಲೆಸುತ್ತಾರೆ ಎಂಬ ಭಾವನೆಯೇ  ದೀಪದ ಪೂಜೆಗೆ ಕಾರಣ. ಎಲ್ಲರೂ ಸೇರಿ ಹಬ್ಬ ಆಚರಿಸುವುದರಿಂದ ಇದನ್ನು ‘ಒಡಹುಟ್ಟಿದವರ ಹಬ್ಬ’ ಎಂದೂ ಕರೆಯುತ್ತಾರೆ.

ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ವಿಧ ವಿಧದ ಉಂಡಿಗಳನ್ನು ತಯಾರಿಸುತ್ತಾರೆ. ಶೇಂಗಾ, ಎಳ್ಳು, ಪುಟಾಣಿ, ಚುರುಮುರಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್, ಲಡಗಿ, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪೊಳೆ, ಬಾದುಷಾ, ಮಾದ್ಲಿ, ಮಂಡಗಿ ಹೀಗೆ ಹಬ್ಬದ ಸವಿಗೆ ಹಲವು ಪ್ರಕಾರ ಸಿಹಿ ಖಾದ್ಯ ಇರಲೇ ಬೇಕು.

ಸಿಹಿ ತಿಂದು ಬೇಸರವಾದರೆ ಮೆಲ್ಲಲು ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿ, ಬಡಂಗ, ಖಾರದಾಣಿ, ಖಾರದ ಉಸುಳಿ, ಖಾರದ ಎಳ್ಳು ಸಹ ಸಿದ್ಧವಾಗಿರುತ್ತವೆ.
ಉತ್ತರ ಕರ್ನಾಟಕಕ್ಕೂ ಜೋಳದ ರೊಟ್ಟಿಗೂ ಅವಿನಾಭಾವ ಸಂಬಂಧ ಇದೆ. ರೊಟ್ಟಿ ಪಂಚಮಿ ಸಿದ್ಧತೆಗಳು ವಾರದ ಹಿಂದಿನಿಂದಲೇ ಪ್ರಾರಂಭ ಆಗುತ್ತದೆ. ಹಬ್ಬದ ಹಿಂದಿನ ದಿನ ಮನೆಗಳಲ್ಲಿ ಅವರವರ ಶಕ್ತ್ಯಾನುಸಾರ ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ ಮಾಡುತ್ತಾರೆ.

ಹಬ್ಬದ ದಿನ ಎಣಗಾಯಿ, ಹೆಸರು, ಮಡಕಿ ಕಾಳು ಪಲ್ಯ, ಉಸುಳಿ, ಮೊಸರಿನ ಉಂಡೆ, ಶೇಂಗಾ ಚೆಟ್ನಿ, ಗುರೆಳ್ಳು ಚಟ್ನಿ ತಯಾರಿಸುತ್ತಾರೆ. ನೆರೆ ಹೊರೆಯ ಮನೆಗಳಿಗೆ ತೆರಳಿ ರೊಟ್ಟಿ ಪಲ್ಯೆ ಕೊಟ್ಟು ಬರುತ್ತಾರೆ. ಬುಧವಾರ ಗದುಗಿನ ಗಂಗಾಪೂರ ಪೇಟೆಯಲ್ಲಿ ಮಹಿಳೆಯರು ಸಂಭ್ರಮ ದಿಂದ ರೊಟ್ಟಿ ಪಂಚಮಿ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.