ADVERTISEMENT

ಸಂಭ್ರಮದ ಮಾರುತಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2014, 7:45 IST
Last Updated 18 ಏಪ್ರಿಲ್ 2014, 7:45 IST

ಗದಗ: ತಾಲ್ಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಮಾರುತಿ ರಥೋತ್ಸವ ಈಚೆಗೆ ಹರ್ಷೊದ್ಗಾರ ಹಾಗೂ ಜಯಘೋಷಗಳ ಮಧ್ಯೆ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.

ರಥ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ಪುಷ್ಪಗಳನ್ನು ಎಸೆದು ಭಕ್ತಿಸರ್ಮಪಿಸಿ ದರು. ಇದಕ್ಕೂ ಮುನ್ನ  9 ದಿನಗಳಿಂದ ನಡೆದು ಬಂದಿದ್ದ ಮಾರುತಿ ದೇವರ ಅಭಿಷೇಕ, ಪುರಾಣ ಪ್ರವಚನದ ಮಂಗಲ ಹಾಗೂ ಬಾಲಮಾರುತಿ ಯನ್ನು ತೊಟ್ಟಿಲಿಗೆ ಹಾಕುವ ಕಾರ್ಯ ಕ್ರಮ ವಿಜೃಂಭಣೆಯಿಂದ ನಡೆದವು.

ಮಾರುತಿ ದೇವರ ವಿಗ್ರಹವನ್ನು ದೇವಸ್ಥಾನದಿಂದ ಮಾರುತಿ ಯುವಕ ಮಂಡಳದ ಝಾಂಜ್ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ರಥೋತ್ಸವದ ಸ್ಥಳಕ್ಕೆ ತರಲಾಯಿತು. ವೀರೇಶ್ವರ ಸ್ವಾಮೀಜಿ, ಸಿದ್ಧಾರೂಢ ಮಠದ ಸಿದ್ಧಯ್ಯ ಸ್ವಾಮೀಜಿ, ಮೈಲಾರಲಿಂಗೇಶ್ವರ ಮಠದ ಶರಣಬಸವ ಮಹಾರಾಜ ಸಾನಿಧ್ಯದಲ್ಲಿ ಪುಷ್ಪಾಲಂಕೃತವಾಗಿದ್ದ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಗಮನ ಸೆಳೆದ ಮಲ್ಲಗಂಭ ಪ್ರದರ್ಶನ:  ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಶ್ರಮಜೀವಿ ಸ್ವ-ಸಹಾಯ ಸಂಘದವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಮಗಿರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರದರ್ಶಿಸಿದ ಮಲ್ಲಗಂಭ ಪ್ರದರ್ಶನ  ಮೆಚ್ಚುಗೆಗೆ ಪಾತ್ರವಾಯಿತು. ರಾಮಗಿರಿ ಶಾಲೆಯ  ಬಾಲಕ ಹಾಗೂ ಬಾಲಕಿಯರು ಸುಮಾರು ಒಂದು ಗಂಟೆಗೂ ಹೆಚ್ಚಿನ ಕಾಲ ನಡೆಸಿಕೊಟ್ಟ ಮಲ್ಲಗಂಭದಲ್ಲಿನ ವಿವಿಧ ಆಸನಗಳು ಹಾಗೂ ಭಂಗಿಗಳು ನೋಡುಗರ ಉಸಿರು ಬಿಗಿಹಿಡಿದುಕೊಳ್ಳುವಂತೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.