ADVERTISEMENT

ಸಂರಕ್ಷಿತ ಅರಣ್ಯ ಸ್ಥಾನ ಘೋಷಣೆಗೆ ಆಗ್ರಹ

ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆಯಿಂದ ತಹಶೀಲ್ದಾರ್‌ಗೆ ಮನವಿ, ಹೋರಾಟ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:02 IST
Last Updated 19 ಜನವರಿ 2017, 6:02 IST
ಸಂರಕ್ಷಿತ ಅರಣ್ಯ ಸ್ಥಾನ ಘೋಷಣೆಗೆ ಆಗ್ರಹ
ಸಂರಕ್ಷಿತ ಅರಣ್ಯ ಸ್ಥಾನ ಘೋಷಣೆಗೆ ಆಗ್ರಹ   

ಮುಂಡರಗಿ: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ವಿಶಾಲವಾಗಿ ಹಬ್ಬಿರುವ ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸುವ ಕುರಿತಂತೆ ಸರ್ಕಾರ ಮೀನ ಮೇಷ ಎಣಿಸುತ್ತಿದ್ದು, ತಕ್ಷಣ ಕಪ್ಪತಗುಡ್ಡಕ್ಕೆ ಮತ್ತೆ ಸಂರಕ್ಷಿತ ಅರಣ್ಯ ಪ್ರದೇಶದ ಸ್ಥಾನ ಮಾನ ನೀಡ­ಬೇಕು ಎಂದು ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಪ್ಪತಗುಡ್ಡವು ಈಭಾಗದ ಏಕೈಕ ಅರಣ್ಯ ಸಂಪತ್ತಾಗಿದ್ದು, ಅದನ್ನು ಸಂರಕ್ಷಿಸುವ ಮತ್ತು ಅಭಿವೃದ್ಧಿ ಪಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸರ್ಕಾರ ತಕ್ಷಣ ಕಪ್ಪತಗುಡ್ಡಕ್ಕೆ ಪುನಃ ಸಂರಕ್ಷಿತ ಅರಣ್ಯ ಪ್ರದೇಶದ ಸ್ಥಾನ ಮಾನ ನೀಡಬೇಕು.

ತಕ್ಷಣ ಕಪ್ಪತಗುಡ್ಡ ಪ್ರಾಧಿಕಾರವನ್ನು ರಚನೆ ಮಾಡಬೇಕು. ಕಪ್ಪತಗುಡ್ಡದಲ್ಲಿ ಆಯುರ್ವೇದ ವಿಶ್ವ­ವಿದ್ಯಾಲಯವನ್ನು ಸ್ಥಾಪಿಸಿ ಅಲ್ಲಿ ಔಷಧಿ ಸಸ್ಯಗಳ ವಿಶೇಷ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು. ಆಯುರ್ವೇದ ಔಷಧ ತಯಾರಿಕಾ ಘಟಕ ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಕೈಗಾರಿಕೆಗಳು, ಗಾಳಿಯಂತ್ರಗಳು,ಕೃಷಿ ಜಮೀನುಗಳು ತಲೆ ಎತ್ತಿವೆ. ಅರಣ್ಯದಲ್ಲಿ ಹೆದ್ದಾರಿಗಳು ನಿರ್ಮಾಣ­ವಾಗಿರು­ವುದರಿಂದ ಅರಣ್ಯದಲ್ಲಿ ಜನ ಸಂಪರ್ಕ ಹೆಚ್ಚಾಗಿದೆ. ತಕ್ಷಣ ಅದಕ್ಕೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿದರು.

ಕ್ರಿ.ಶ. 1857ರಲ್ಲಿ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಕಪ್ಪತಗುಡ್ಡವು ಅವರ ಆಳ್ವಿಕೆಯಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಲ್ಪಟ್ಟಿತ್ತು. ಅಂದಿನಿಂದ ಆಯರ್ವೇದದ ಸಸ್ಯಕಾಶಿ ಎಂದು ಅದು ಪ್ರಸಿದ್ಧಿ ಪಡೆದಿತ್ತು. ವನ್ಯಜೀವಿಗಳ ತಾಣವಾದ ಕಪ್ಪತಗುಡ್ಡ ಪ್ರದೇಶ ಇಂದು ಸಂಪೂರ್ಣವಾಗಿ ನಶಿಸಿ ಹೋಗಿದೆ ಎಂದು ತಿಳಿಸಿದರು.

ಗುಡ್ಡದ ಮೇಲೆ ಸ್ಥಾಪಿಸಿರುವ ಎಲ್ಲ ಗಾಳಿಯಂತ್ರಗಳನ್ನು ತೆರವು­ಗೊಳಿಸ­ಬೇಕು. ಕೈಗಾರಿಕೆ ಚಟುವಟಿಕೆಗಳಿಗೆ  ನೀಡಿರುವ ಪರವಾನಗಿಯನ್ನು ರದ್ದು ಮಾಡಬೇಕು. ಆಕ್ರಮವಾಗಿ ಕೃಷಿ  ಚಟು­ವಟಿಕೆ ನಡೆಸುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಬಸಪ್ಪ ವಡ್ಡರ, ಅಂದಾನಗೌಡ ಕುಲಕರ್ಣಿ ಮೊದಲಾ­ದವರು ಹಾಜರಿದ್ದರು.

*
ಕಪ್ಪತಗುಡ್ಡವನ್ನು ರಕ್ಷಿಸುವ ಕುರಿತಂತೆ ವಿದೇಶಿಯರಿಗೆ ಇರು­ವಷ್ಟು ಕಾಳಜಿ ನಮ್ಮ ಜನನಾಯಕರಿಗೆ ಇಲ್ಲದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ.
–ಬಸವರಾಜ ನವಲಗುಂದ,
ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT