ADVERTISEMENT

‘ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ’

ರಜನಿ ಕೊಪ್ಪರ್ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2016, 8:34 IST
Last Updated 27 ಡಿಸೆಂಬರ್ 2016, 8:34 IST
ಗದುಗಿನ ವಿದ್ಯಾದಾನ ಸಮಿತಿಯ ಬಾಲಕಿಯರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ ಡಿ.ವಿ.ಬಡಿಗೇರ ಅವರಿಗೆ ಡಾ.ರಾಘವೇಂದ್ರ ಪಾಟೀಲ ‘ರಜನಿ ಕೊಪ್ಪರ್ ಸಾಹಿತ್ಯ ಪುರಸ್ಕಾರ’ ನೀಡಿ, ಸನ್ಮಾನಿಸಿದರು
ಗದುಗಿನ ವಿದ್ಯಾದಾನ ಸಮಿತಿಯ ಬಾಲಕಿಯರ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ ಡಿ.ವಿ.ಬಡಿಗೇರ ಅವರಿಗೆ ಡಾ.ರಾಘವೇಂದ್ರ ಪಾಟೀಲ ‘ರಜನಿ ಕೊಪ್ಪರ್ ಸಾಹಿತ್ಯ ಪುರಸ್ಕಾರ’ ನೀಡಿ, ಸನ್ಮಾನಿಸಿದರು   

ಗದಗ: ಸಾಮಾಜಿಕ ಪರಿವರ್ತನೆಗೆ ಪ್ರತಿಯೊಬ್ಬರ ಪ್ರಯತ್ನ ಅಗತ್ಯವಾಗಿದೆ. ಸಾಂಸ್ಕೃತಿಕ ನೆಲೆಯಲ್ಲಿ ಸಾಧಿಸುವ ಕಾರ್ಯಗಳು ಫಲಪ್ರದವಾಗುತ್ತವೆ ಎಂದು ಸಾಹಿತಿ ಡಾ.ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.

ನಗರದ ವಿದ್ಯಾದಾನ ಸಮಿತಿ ಬಾಲಕಿಯರ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಕೊಪ್ಪರ್ ಅಕಾಡೆಮಿ ಆಶ್ರಯದಲ್ಲಿ ಪ್ರಸಕ್ತ ಸಾಲಿನ ‘ರಜನಿ ಕೊಪ್ಪರ್ ಸಾಹಿತ್ಯ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯಿಕ ಅಭಿರುಚಿ ಪ್ರೇರೇಪಿಸುವ ದೃಷ್ಟಿಕೋನ ಎಲ್ಲರಿಗೂ ಅವಶ್ಯವಾಗಿದೆ. ಹವ್ಯಾಸಿ ಬರಹಗಾರರನ್ನು ಪ್ರೇರೇಪಿಸಿ, ಅವರ ವಿಶಿಷ್ಟ ಸಾಧನೆಗಳನ್ನು ಗೌರವಿಸಬೇಕಿದೆ ಎಂದು ತಿಳಿಸಿದ ಅವರು, ಜನರಲ್ಲಿ ಸಾಹಿತ್ಯದ ಆಸಕ್ತಿ ಮೂಡಿಸುವ ಕಾರ್ಯ ಚುರುಕಾಗಿ ನಡೆದಾಗ ಮಾತ್ರ  ಪರಿವರ್ತನೆಯ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಕಳೆದ 10 ವರ್ಷಗಳಿಂದ ಕೊಪ್ಪರ್ ಅಕಾಡೆಮಿ ಉತ್ತಮ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದೆ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಗೋಗೇರಿ, ಮಂಜುನಾಥ ಅಬ್ಬಿಗೇರಿ ಮಾತನಾಡಿದರು. ನಂತರ ಚುಟುಕು ಸಾಹಿತಿ ಡಿ.ವಿ.ಬಡಿಗೇರ ಹಾಗೂ ಬಿ.ಎಂ.ಹರಪನಹಳ್ಳಿ ಅವರಿಗೆ ಸಾಹಿತಿ ಡಾ.ರಾಘವೇಂದ್ರ ಪಾಟೀಲ್ ‘ರಜನಿ ಕೊಪ್ಪರ್ ಸಾಹಿತ್ಯ ಪುರಸ್ಕಾರ’ ನೀಡಿದರು.

ಪ್ರಾಧ್ಯಾಪಕ ಎಸ್.ವೈ.ಚಿಕ್ಕಟ್ಟಿ, ಪಿ.ಕೆ.ಯಾವಗಲ್, ಎಂ.ಎಸ್.ಕುಲಕರ್ಣಿ ನಿವೃತ್ತ ಶಿಕ್ಷಕ ಪವಾಡಿಗೌಡರ, ಕಲಾವತಿ ಹವಳದ, ಭಾಗ್ಯಲಕ್ಷ್ಮೀ ಕುಬೇರ, ಅಮೃತೇಶ ಹೊಸಳ್ಳಿ, ಎಸ್.ಎಸ್.ಇಟಗಿ, ಎಸ್.ವಿ.ಕಮ್ಮಾರ, ಎಸ್.ಎಸ್.ಬಡಿಗೇರ, ಶೋಭಾ ಪಿಡ್ಡಿ, ಕಡಣಿ ಶಾಸ್ತ್ರಿ, ಬಿ.ಬಿ.ಮಾಲಗತ್ತಿ, ಡಾ.ಯೋಗೇಶನ್, ಮಹೇಶ ಮಮದಾಪೂರ ಇದ್ದರು.
ಪ್ರಾಧ್ಯಾಪಕ ರವೀಂದ್ರ ಕೊಪ್ಪರ್ ಅಧ್ಯಕ್ಷತೆವಹಿಸಿದ್ದರು.

ವೆಂಕಟೇಶ ಕುಲಕರ್ಣಿ ಪ್ರಾರ್ಥಿಸಿದರು, ರಘೋತ್ತಮ ಕೊಪ್ಪರ್ ಸ್ವಾಗತಿಸಿದರು, ದತ್ತಪ್ರಸನ್ನ ಪಾಟೀಲ ನಿರೂಪಿಸಿದರು, ಅಮೀರ ನಾಯಕ ವಂದಿಸಿದರು.
ರಾಜು ರೋಖಡೆ, ಸಂತೋಷ ಪಾಟೀಲ, ಮಹೇಶ ಹೆರಕಲ್, ಸುನೀತಾ ಬೂನಕೊಪ್ಪ, ವನಮಾಲಾ ಕುಲಕರ್ಣಿ, ಶೋಭಾ ಕುಲಕರ್ಣಿ, ಮುಳಗುಂದದ ಆರ್.ಎನ್.ದೇಶಪಾಂಡೆ, ಡಾ.ಎಸ್.ಸಿ.ಚವಡಿ, ಗಣೇಶ ಕುಂದರವಾಡ, ಮಂಜುಳಾ ದೇಸಾಯಿಮಠ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.