ADVERTISEMENT

ಸಿಪಿಎಂ ಪ್ರತಿಭಟನೆ

ಕಾರ್ಮಿಕ ವಿರೋಧಿ ನೀತಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:18 IST
Last Updated 27 ಮೇ 2015, 7:18 IST

ಗಜೇಂದ್ರಗಡ:  ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದರೂ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸಿಪಿಎಂ  ಕಾರ್ಯಕರ್ತರು ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂನ ಪುರಸಭೆ ಸದಸ್ಯ ಎಂ.ಎಸ್.ಹಡಪದ ಮಾತನಾಡಿ ‘ವಿದೇಶದಲ್ಲಿನ ಕಪ್ಪು ಹಣ ವಾಪಸ್‌,  ಬೆಲೆ ಏರಿಕೆಗೆ ನಿಯಂತ್ರಣ, ಉದ್ಯೋಗದ ಹೆಚ್ಚಳ, ದೇಶದಲ್ಲಿ ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಬಿಜೆಪಿಯು ರೈತರ ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಮುಖಂಡರು ದೂರಿದರು.

ಕೂಡಲೇ ಭೂ ಸ್ವಾಧೀನ ಕಾಯ್ದೆ ಹಿಂಪಡೆಯುವುದು,  ಕಾರ್ಮಿಕ ಕಲ್ಯಾಣ ಬಯಸುವ ಕನಿಷ್ಠ ಕೂಲಿ, ಭವಿಷ್ಯನಿಧಿ, ಪಿಂಚಣಿ, ವಿಮಾ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರಿಗೆ ಮೋಸ ಮಾಡಲಾಗಿದೆ. ಸ್ವಾತಂತ್ರ್ಯ ಭಾರತದ ಆಶಯಗಳನ್ನು ಮಣ್ಣುಗೂಡಿಸಿ ದೇಶದ ಸಾರ್ವಭೌಮತೆಗೆ ಧಕ್ಕೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

  ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ ‘ಪ್ರಧಾನಿ ಮೋದಿ ಬಡವರ ಬಗ್ಗೆ ದೇಶದಲ್ಲಿ ಮತ್ತು ವಿದೇಶದಲ್ಲಿ ಭಾಷಣಗಳನ್ನು ಮಾಡುತ್ತಾರೆ. ಅಲ್ಲಿ ಬಡವರ ಕುರಿತು ಅನುಕಂಪದ ಮಾತನಾಡಿದರೆ ಸಾಲದು ಬಡತನ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರವು ಯಾವುದೇ ಕಾರ್ಯಕ್ರಮ ರೂಪಿಸಿಲ್ಲ.

ವಿದೇಶದ ಅನಿವಾಸಿ ಭಾರತೀಯರೊಂದಿಗೆ ಮತ್ತು ದೇಶದಲ್ಲಿ ‘ಮನ್ ಕೀ ಬಾತ್’ ಹೆಸರಲ್ಲಿ ರೇಡಿಯೋ ಮತ್ತು ಟಿ.ವ್ಹಿ.ಗಳಲ್ಲಿ ಮಾತನಾಡುತ್ತಾರೆ. ಪ್ರಧಾನಿಗೆ ಸಂಸತ್ತಿನ ಘನತೆ ಎತ್ತಿ ಹಿಡಿಯುತ್ತಿಲ್ಲ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಫಯಾಜ್ ತೋಟದ್‌, ಪೀರು ರಾಠೋಡ, ಬಸವರಾಜ ಶೀಲವಂತರ, ಎಂ.ಬಿ.ಸೋಂಪೂರ, ಮೈಬು ಹವಾಲ್ದಾರ, ಈ.ಕೆ.ಬಡಿಗೇರ, ಕಾಳಪ್ಪ ರಾಠೋಡ, ಶಿವಾನಂದ ಬೋಸ್ಲೆ, ಶಿವಾಜಿ ಗಡ್ಡದ, ಅಂಬರೀಶ ರಾಠೋಡ, ಶಿವಪ್ಪ ಕೆಟಗೇರಿ, ಶಿವಪ್ಪ ಚವ್ಹಾಣ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.