ADVERTISEMENT

ಹಳ್ಳಿಕೇರಿಯಲ್ಲಿ ಬಾಲ್ಯವಿವಾಹ ತಡೆದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:26 IST
Last Updated 21 ಏಪ್ರಿಲ್ 2017, 7:26 IST

ಗದಗ: ಮುಂಡರಗಿ ತಾಲ್ಲೂಕಿನ ಹಳ್ಳಿಕೇರಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಏ.17ರಂದು ನಿಗದಿಯಾಗಿದ್ದ ಬಾಲ್ಯವಿವಾಹ ತಡೆಯುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಕಾಶ ಎಂ ವಾಲಿ, ಪರಿವೀಕ್ಷಣಾಧಿಕಾರಿ ಮಂಜುಳಾ ಬೂದಪ್ಪನವರ, ಸಿಬ್ಬಂದಿ  ಪ್ರಭಾವತಿ ಬೆಟಗೇರಿ, ಲಲಿತಾ ಕುಂಬಾರ ಹಾಗೂ  ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ದೇವಸ್ಥಾನಕ್ಕೆ ಹೋಗಿ ಪರಿಶೀಲಿಸಿದಾಗ ಅಲ್ಲಿ ಮದುವೆಯ ತಯಾರಿ ಮಾಡಿಕೊಂಡಿದ್ದು ಕಂಡುಬಂದಿತು. ಆದರೆ, ಗಂಡು ಮತ್ತು ಹೆಣ್ಣು ಇರಲಿಲ್ಲ. ಅಲ್ಲಿ ಸೇರಿದ ಜನರನ್ನು ವಿಚಾರಿಸದಾಗ ದೀಡ್‌ನಮಸ್ಕಾರ ಹಾಕಲು ದೇವಸ್ಥಾನಕ್ಕೆ ಬಂದಿರುವುದಾಗಿ ಹೇಳಿದರು.

ನಂತರ  ದೇವಸ್ಥಾನದ ಆವರಣದಲ್ಲಿ ಮದುವೆ ಪೆಂಡಾಲ್‌ ಪರಿಶೀಲಿಸಿದಾಗ, ಹಂಪಿ ವಿರೂಪಾಕ್ಷೇಶ್ವರ ಶಾಮಿಯಾನ ಎಂದು ಖರ್ಚಿಯ ಹಿಂದೆ ಬರೆದು ಮೊಬೈಲ್‌ ನಂಬರ್‌ ಬರೆಯಲಾಗಿತ್ತು, ಆ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಮದುವೆ ನಿಗದಿಯಾಗಿದ್ದ ಕುರಿತು ಮಾಹಿತಿ ಲಭಿಸಿತು. ಆದರೆ, ಈ ಕುರಿತು ದೇವಸ್ಥಾನದ ಆವರಣದಲ್ಲಿ ಸೇರಿದ್ದ ಯಾರನ್ನು ವಿಚಾರಿಸಿದರೂ ಗಂಡು ಹೆಣ್ಣಿನ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ.

ನಂತರ ಅಂಗನವಾಡಿಯ ಮೇಲ್ವಿಚಾರಕಿಯರು, ಗ್ರಾಮ ಪಂಚಾಯತಿ ಸದಸ್ಯರು, ಪಿಡಿಒ ಸ್ಥಳದಲ್ಲಿ ಜಮಾಯಿಸಿ, ಗ್ರಾಮಸ್ಥರಿಗೆ ಬಾಲ್ಯವಿವಾಹದಿಂದ ಆಗುವ ಪರಿಣಾಮಗಳ ಕುರಿತು ಮನದಟ್ಟು ಮಾಡಿಕೊಟ್ಟರು.ಸ್ಥಳದಲ್ಲಿದ್ದ ಹಿರಿಯರು ಗಂಡು ಮತ್ತು ಹೆಣ್ಣನ್ನು ಕರೆಸಿದರು. ನಂತರ ಲಗ್ನ ಪತ್ರಿಕೆ, ಇಬ್ಬರ ಶಾಲಾ ದಾಖಲೆಗಳು, ಆಧಾರ ಕಾರ್ಡ್ ಪರಿಶೀಲಿಸಿ, ಮದುವೆ ನಿಲ್ಲಿಸುವಂತೆ ಸೂಚಿಸಲಾಯಿತು. ಬಾಲಕಿಯನ್ನು ಬಾಲ್ಯವಿವಾಹದಿಂದ ರಕ್ಷಣೆ ಮಾಡಲಾಯಿತು.ಎರಡೂ ಕಡೆಯವರಿಗೆ ಏ. 19ರಂದು ನಡೆಯುವ ಮಕ್ಕಳ ಕಲ್ಯಾಣ ಸಮಿತಿ ಸಭೆಗೆ ಹಾಜರಾಗುವಂತೆ ಸೂಚನೆ ನೀಡಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.