ADVERTISEMENT

24 ಗ್ರಾಮಗಳಿಗೆ 4 ಪೊಲೀಸರು..!

ಲಕ್ಷ್ಮಣ ಎಚ್.ದೊಡ್ಡಮನಿ
Published 18 ನವೆಂಬರ್ 2017, 7:16 IST
Last Updated 18 ನವೆಂಬರ್ 2017, 7:16 IST
ಡಂಬಳದಲ್ಲಿರುವ ಪೊಲೀಸ್ ಹೊರಠಾಣೆ
ಡಂಬಳದಲ್ಲಿರುವ ಪೊಲೀಸ್ ಹೊರಠಾಣೆ   

ಡಂಬಳ: ಇಪ್ಪತ್ತನಾಲ್ಕು ಗ್ರಾಮಗಳು, ಅಂದಾಜು 70ಸಾವಿರ ಜನಸಂಖ್ಯೆ, ಸುತ್ತಮುತ್ತ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿ ಹರಡಿಕೊಂಡಿರುವ ಕಪ್ಪತ್ತಗುಡ್ಡ, ಹಲವು ಧಾರ್ಮಿಕ, ಪ್ರವಾಸಿ ಸ್ಥಳಗಳು. ಇಷ್ಟೊಂದು ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಇರುವ ಪೊಲೀಸ್‌ ಸಿಬ್ಬಂದಿ ಬರಿ ನಾಲ್ವರು.

ಡಂಬಳದಲ್ಲಿರುವ ಹೊರಠಾಣೆ ವ್ಯಾಪ್ತಿಗೆ 24 ಗ್ರಾಮಗಳು ಬರುತ್ತವೆ. ಈ ಹೊರಠಾಣೆಯನ್ನು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಸಾರ್ವಜನಿಕರ ಹಲವು ದಶಕಗಳ ಬೇಡಿಕೆ ಇನ್ನೂ ಈಡೇರಿಲ್ಲ. ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ.

ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾಗಿರುವ ಈ ಹೊರಠಾಣೆಗೆ 124 ವರ್ಷಗಳ ಇತಿಹಾಸವಿದೆ. ಒಬ್ಬ ಎಎಸ್‍ಐ, ಒಬ್ಬ ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಡಂಬಳ ಹೋಬಳಿಯು ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರ 7 ತಾಲ್ಲೂಕ ಪಂಚಾಯಿತಿ 7 ಗ್ರಾಮ ಗ್ರಾಮ ಪಂಚಾಯಿತಿ ಕ್ಷೇತ್ರಗಳನ್ನು ಹೊಂದಿದೆ. ಅಪರಾಧ, ಅಕ್ರಮ ಚಟುವಟಿಕೆಗಳು ನಡೆದು ದೂರ ನೀಡಬೇಕಾದರೆ ಸಾರ್ವಜನಿಕರು ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಸ್ತೆ ಅಪಘಾತ ಸಂಭವಿಸಿದರೆ 20 ಕಿ.ಮೀ ದೂರದಿಂದ ಡಂಬಳ ಠಾಣೆ ಪೊಲೀಸರೇ ಸ್ಥಳಕ್ಕೆ ಬರಬೇಕು. ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಕಳ್ಳಬಟ್ಟಿ ತಯಾರಿಕೆ, ಜೂಜಾಟ, ಅಕ್ರಮ ಮದ್ಯ ಮಾರಾಟ, ಕಳ್ಳರ ಹಾವಳಿ ಇತ್ಯಾದಿ ಅಕ್ರಮಗಳ ಮೇಲೆ ಕಣ್ಣಿಡಬೇಕು.

‘2007ರಲ್ಲಿ ಆಗಿನ ಕಂದಾಯ ಸಚಿವ ಎಂ.ಪಿ. ಪ್ರಕಾಶ ಅವರು ರಾಜ್ಯದಲ್ಲಿ 15 ಪೊಲೀಸ್ ಠಾಣೆ ಮಂಜೂರು ಮಾಡಲಾಗಿದೆ. ಅದರಲ್ಲಿ ಡಂಬಳ ಪೊಲೀಸ್ ಠಾಣೆಯೂ ಒಂದು ಎಂದು ಘೋಷಿಸಿದ್ದರು. ಆದರೆ, ಅದು ಇನ್ನೂ ಕಾರ್ಯಗತಗೊಂಡಿಲ್ಲ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಂಜುನಾಥ ಅರವಟಿಗಿಮಠ ಮತ್ತು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ  ನಿಂಗಬಸಪ್ಪ ಪ್ಯಾಟಿ.

‘ಪೊಲೀಸ್ ಠಾಣೆಗಾಗಿ 1 ಎಕರೆ 20ಗುಂಟೆ ಜಾಗವಿದೆ. ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಇದು ಸಾಧ್ಯವಾಗಿಲ್ಲ’ ಎಂದು ದೂರುತ್ತಾರೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ವೈ.ಎನ್ ಗೌಡರ ಮತ್ತು ವಿ.ಬಿ ನಂಜಪ್ಪನವರ.

* * 

ಹೊರ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮಾಡುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. 
ಮಂಜುನಾಥ ನಡುವಿನಮನಿ
ಸಿಪಿಐ ಮುಂಡರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.