ADVERTISEMENT

ಡಂಬಳ: ಮೂಲಸೌಕರ್ಯ ಮರೀಚಿಕೆ, ಸಮಸ್ಯೆಯ ಸುಳಿಯಲ್ಲಿ ಹಿರೇವಡ್ಡಟ್ಟಿ

ಲಕ್ಷ್ಮಣ ಎಚ್.ದೊಡ್ಡಮನಿ
Published 17 ಜನವರಿ 2024, 6:23 IST
Last Updated 17 ಜನವರಿ 2024, 6:23 IST
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ   

ಡಂಬಳ: ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ಇಲ್ಲಿನ ಜನರು ಈಗಲೂ ಎದುರು ನೋಡುತ್ತಿದ್ದಾರೆ. ಮೂಲಸೌಕರ್ಯವಿಲ್ಲದೆ ನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ.

ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮವು ಹಲವಾರು ಸಮಸ್ಯೆಗಳಿಂದ ಬಳಲುತ್ತಿದೆ. ಗ್ರಾಮದಲ್ಲಿ ಅಂದಾಜು 12,500 ಜನಸಂಖ್ಯೆ ಇದೆ. ಆರು ವಾರ್ಡ್‌ಗಳಿದ್ದು, 19 ಗ್ರಾಮ ಪಂಚಾಯ್ತಿ ಸದಸ್ಯರು ಇದ್ದಾರೆ.

ಅನ್ನದಾನೇಶ್ವರ ಮಠದ ಹತ್ತಿರ ಮತ್ತು ಭೋವಿ ಕಾಲೊನಿಯಲ್ಲಿ ತಲಾ ಒಂದು ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ, ಸಮರ್ಪಕ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ. ನೀರಿಗಾಗಿ ಡಂಬಳ ಅಥವಾ ಹಾರೂಗೇರಿ ಗ್ರಾಮಕ್ಕೆ ಹೋಗಬೇಕು. 

ADVERTISEMENT

ಗಟಾರ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ, ಅಲ್ಲಲ್ಲಿ ಚರಂಡಿ ಕಟ್ಟಿಕೊಂಡಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ, ಸಾಂಕ್ರಾಮಿಕ ರೋಗದ ಭೀತಿ ಎದುರುಗಾಗಿದೆ. ಈ ಅವ್ಯವಸ್ಥೆಯಲ್ಲೇ ಗ್ರಾಮಸ್ಥರು ಜೀವನ ಕಳೆಯುವಂತಾಗಿದೆ.

ಗ್ರಾಮದಲ್ಲಿ ಅಂದಾಜು 800 ಕುಟುಂಬಗಳಿದ್ದು, ಸ್ವಚ್ಛಭಾರತ ಯೋಜನೆಯಡಿ ಸುಮಾರು 500 ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿವೆ. ಆದರೆ, ಬಹುತೇಕರು ಬಯಲಿಗೇ ತೆರಳುತ್ತಾರೆ.

ಸಾರ್ವಜನಿಕ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕು. ಜಲ್ ಜೀವನ್ ಯೋಜನೆಯಡಿ ಪ್ರತಿ ಮನೆಗೆ  ನಳದ ಸಂರ್ಪಕ ಕಲ್ಪಿಸಿದ್ದರೂ, ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕ ಅನುಷ್ಠಾನ ಮಾಡಬೇಕು. ಶಾಶ್ವತ ಯೋಜನೆ ರೂಪಿಸಬೇಕು ಎದು ಗ್ರಾಮಸ್ಥರು ಆಗ್ರಹಿಸಿದರು.

‘ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯ್ತಿಗೆ ಕೋಟ್ಯಂತರ ರೂಪಾಯಿ ಅನುದಾನ ಬರುತ್ತದೆ. ನರೇಗಾ ಯೋಜನೆಯಲ್ಲೇ ಸಾಕಷ್ಟು ಅಭಿವೃದ್ಧಿ ಮಾಡಬಹುದು. ಆದರೆ, ಇದ್ಯಾವುದೂ ಆಗುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಯೋಜನಕ್ಕೆ ಬಾರದಾಗಿದೆ’ ಎಂದು ಗ್ರಾಮಸ್ಥ ದುರಗಪ್ಪ ಮೇವುಂಡಿ ಹೇಳಿದರು.

ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದಲ್ಲಿರುವ ಅಸಮರ್ಪಕ ಚರಂಡಿ ವ್ಯವಸ್ಥೆ
ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದ ಬಸ್ ನಿಲ್ದಾಣದ ಕಿಟಕಿ ಗಾಜು ಒಡೆದಿದೆ
ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆಯಲ್ಲಿ ತ್ಯಾಜ್ಯ ತುಂಬಿದೆ
ಡಂಬಳ ಹೋಬಳಿ ಹಿರೇವಡ್ಡಟ್ಟಿ ಗ್ರಾಮದ ಬಸ್ ನಿಲ್ದಾಣದ ಆವರಣವೇ ಶೌಚಾಲಯವಾಗಿದೆ

ಬಸ್ ನಿಲ್ದಾಣಕ್ಕೆ ಬೇಕಿದೆ ಕಾಯಕಲ್ಪ

‘ಗದಗ ಮತ್ತು ಮುಂಡರಗಿ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಹೋಗುತ್ತೇವೆ. ಸಮರ್ಪಕವಾಗಿ ಬಸ್ ಇಲ್ಲದ ಕಾರಣ ಶಾಲಾ–ಕಾಲೇಜುಗಳಿಗೆ ತಡವಾಗಿ ಹೋಗುತ್ತೇವೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಹೋಗಲು ಹರಸಾಹಸ ಮಾಡಬೇಕು’ ಎಂದು ವಿದ್ಯಾರ್ಥಿ ಭೀಮಪ್ಪ ಮುದಕಪ್ಪ ದೊಡ್ಡಮನಿ ಹೇಳಿದರು. ‘ಬಸ್ ನಿಲ್ದಾಣದಲ್ಲಿ ಕುಳಿತುಕೊಳ್ಳಲಾಗದಂತಹ ಸ್ಥಿತಿ ಇದೆ. ನಿತ್ಯ ಎರಡು ಅಥವಾ ಮೂರು ಹೆಚ್ಚುವರಿ ಬಸ್‌ ಸೇರಿದಂತೆ ಶೌಚಾಲಯ ಕುಡಿಯವ ನೀರಿನ ಸೌಲಭ್ಯ ಕಲ್ಪಿಸಬೇಕು’ ಎನ್ನುತ್ತಾರೆ ವಿದ್ಯಾರ್ಥಿನಿ ಪವಿತ್ರಾ ಕುರಿ.

‘ಗ್ರಾಮದ ಅಭಿವೃದ್ಧಿಗೆ ಆದ್ಯತೆ’

‘ಶೌಚಾಲಯ ಬಳಕೆ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. 2023-24ನೇ ಸಾಲಿನ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಪಿಡಿಒ ಲತಾ ಮಾನೆ ಹೇಳಿದರು.  ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಜಲ್‌ ಜೀವನ್‌ ಮಿಷನ್‌ ಯೋಜನೆಯಡಿ ಎರಡು ಟ್ಯಾಂಕರ್‌ ನಿರ್ಮಾಣಗೊಂಡಿವೆ. ಶೀಘ್ರದಲ್ಲೇ ಪ್ರತಿಯೊಂದು ಮನೆಗೆ ನಳಗಳ ಮೂಲಕ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತದೆ. ವಾರ್ಡಿನ ಯಾವುದೇ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಬಹುದು’ ಎಂದರು.

‘ಸಾರ್ವಜನಿಕರೂ ಸಹಕರಿಸಿ’

‘ಪುರುಷ ಮತ್ತು ಮಹಿಳೆಯರ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಸಾರ್ವಜನಿಕರಿಂದ ಅರ್ಜಿಗಳು ಬಂದಿವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನರೇಗಾ ಯೋಜನೆಯನ್ನು ಕೂಲಿ ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು’ ಎಂದು  ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವ್ವ ವೆಂಕಪ್ಪ ಬಳ್ಳಾರಿ ತಿಳಿಸಿದರು. ‘ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವ ಕುರಿತು ಇಲಾಖೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗ್ರಾಮದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ. ಗ್ರಾಮ ಪಂಚಾಯ್ತಿ ಸದಸ್ಯರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ’ ಎಂದು ಹೇಳಿದರು.

ಕುಡಿಯುವ ನೀರು ಆರೋಗ್ಯ ಬಸ್ ಸೌಲಭ್ಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು
-ನಾಗರಾಜ ಗುಂಡಿಕೇರಿ ಶರೀಫ, ಹನಮಸಾಗರ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.