ADVERTISEMENT

ಆಗಸ್ಟ್‌ನಲ್ಲಿ ಪೌರಕಾರ್ಮಿಕರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 10:30 IST
Last Updated 19 ಜುಲೈ 2017, 10:30 IST

ಹಾಸನ: ಹಾಸನಾಂಬ ಕಲಾ ಭವನದಲ್ಲಿ ಆಗಸ್ಟ್ ಮೊದಲ ವಾರ 5 ಜಿಲ್ಲೆಗಳ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಹಾಸನ, ಕೊಡಗು, ಚಿಕ್ಕ ಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಫಾಯಿ ಕರ್ಮಚಾರಿಗಳ ಸಮಾವೇಶ ಆಯೋಜಿಸಲು ನಿರ್ಣಯಿಸಲಾಯಿತು.

ಸಫಾಯಿ ಕರ್ಮಚಾರಿಗಳ ಬದುಕು, ವೃತ್ತಿ ಬದುಕಿನಲ್ಲಿ  ಎದುರಿಸುತ್ತಿರುವ ಸವಾಲು ಮತ್ತು ಅದರಿಂದ ಹೊರ ಬರಲು ಅನುಸರಿಬೇಕಾದ ಮಾರ್ಗೋಪಾಯ, ಸುರಕ್ಷಿತ ಸಾಧನಗಳ ಬಳಕೆ ಬಗ್ಗೆ ಅರಿವು ಮೂಡಿಸುವುದು ಹಾಗೂ ಉತ್ತಮ ಸಾಧನೆ ಮಾಡಿದ ಪೌರಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಸನ್ಮಾನಿಸುವುದು ಕಾರ್ಯ ಕ್ರಮದ ಮುಖ್ಯ ಉದ್ದೇಶ ಎಂದು   ವೆಂಕಟೇಶ್ ತಿಳಿಸಿದರು.

ಎಲ್ಲ ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಫಾಯಿ ಕರ್ಮಚಾರಿ ಗಳನ್ನು ಕರೆತರುವಂತೆ ಆಯಾಯ ಜಿಲ್ಲೆಗಳ ನಗರ ಯೋಜನಾ ಕೋಶದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು. ವಿವಿಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳಿಗೂ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಸುರಕ್ಷಿತ ಸಾಮಗ್ರಿಗಳಿಲ್ಲದೆ ದುಡಿಸಿ ಕೊಳ್ಳುವ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಆಸ್ಪತ್ರೆಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾ ಗುವುದು ಎಂದು ಎಚ್ಚರಿಸಿದರು.

ಸ್ವಚ್ಛತಾ ನಿರ್ವಹಣೆ ವೇಳೆ ಮೃತಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ 15  ಪ್ರಕರಣಗಳಲ್ಲಿ  ತಲಾ ₹1 ಲಕ್ಷ ಪರಿಹಾರ ನೀಡಲು ಬಾಕಿ ಇದ್ದು, ಸಮಾವೇಶಕ್ಕೆ ಆಯೋಗದಿಂದ ಈಗಾಗಲೇ ₹ 6 ಲಕ್ಷ ಒದಗಿಸಲಾಗಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚುವರಿ ಹಣ ನೀಡಲಾಗುವುದು ಎಂದು ಭರವಸೆ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರವಾಡ್ , ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ಧರಾಜು, ನಗರಾಭಿವೃದ್ಧಿ ಯೋಜನಾ ನಿರ್ದೇಶಕ  ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.