ADVERTISEMENT

ಉದ್ಘಾಟನೆಯ ಮೊದಲೇ ಸೋರುತಿದೆ ಟ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:11 IST
Last Updated 16 ಫೆಬ್ರುವರಿ 2017, 9:11 IST
ಹಿರೀಸಾವೆ: ಇಲ್ಲಿನ ನುಗ್ಗೇಹಳ್ಳಿ ರಸ್ತೆಯಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಎಲು ನಿರ್ಮಿಸಿರುವ ನೀರು ಸಂಗ್ರಹ (ಓವರ್ ಹೆಡ್್) ಟ್ಯಾಂಕ್‌  ಉದ್ಘಾಟನೆಗೆ ಮೊದಲೇ ನೀರು ಸೋರುತ್ತಿದೆ.
 
ಶಿಕ್ಷಣ ಇಲಾಖೆಗೆ ಸೇರಿದ ಜಾಗದಲ್ಲಿ  2014–15 ನೇ ಸಾಲಿನ ಎನ್‌ಆರ್‌ಡಬ್ಲ್ಯುಪಿ (ನಳ ನೀರು ಸರಬರಾಜು) ಯೋಜನೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಕೆಲವೇ ದಿನಗಳ ಹಿಂದೆ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡಿದ್ದು, ಟ್ಯಾಂಕ್‌ನ ಸುತ್ತು ಬಣ್ಣ ಬಳಿಯಲಾಗಿದೆ. ಸುಮಾರು 50 ಸಾವಿರ ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಇದೆ ಎಂದು ಟ್ಯಾಂಕ್‌ ಮೇಲೆ ಮಾಹಿತಿ ಬರೆಯಲಾಗಿದೆ.
 
ಟ್ಯಾಂಕ್‌ಗೆ ನೀರು ತುಂಬಿದ ದಿನವೇ ಸೋರಿಕೆ ಆರಂಭವಾಗಿದೆ. ಕಳಪೆ ಕಾಮಗಾರಿ ಹಾಗೂ ಟ್ಯಾಂಕ್‌ ಕ್ಯೂರಿಂಗ್‌ ಸರಿಯಾಗಿ ಆಗದೇ ಇರುವುದು  ನೀರು ಸೋರಿಕೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದು ಸುಮಾರು ₹ 50 ಲಕ್ಷ ವೆಚ್ಚದ್ದಾಗಿದ್ದು, ಎರಡು ಹೊಸ ಕೊಳವೆಬಾವಿ ಕೊರೆಯಿಸಿ, ಈ ಟ್ಯಾಂಕ್‌ಗೆ ನೀರು ತುಂಬಿಸಬೇಕು. ಆದರೆ, ಗ್ರಾಮ ಪಂಚಾಯಿತಿಯವರು ಹಿಂದೆ ಕೊರೆಯಿಸಿದ್ದ ಕೊಳವೆ ಬಾವಿಯ ಮೂಲಕವೇ ನೀರು ತುಂಬಿಸಿದ್ದಾರೆ ಎಂಬುದು ಜನರ ಅಭಿಪ್ರಾಯವಾಗಿದೆ. 
 
‘ನೀರಿನ ಟ್ಯಾಂಕ್‌ ಅನ್ನು ಪರಿಶೀಲಿಸಿ, ಲೋಪ ಇದ್ದರೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಗುಣಮಟ್ಟದಲ್ಲಿ ಇದ್ದರೆ ಮಾತ್ರ ಉದ್ಘಾಟನೆ ಮಾಡುತ್ತೇನೆ’ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
 
ತಕ್ಷಣಕ್ಕೆ ನೀರು ಬೇಕಾದ ಕಾರಣ ಗ್ರಾಮ ಪಂಚಾಯಿತಿ ಕೊಳವೆ ಬಾವಿಯನ್ನು ಬಿಟ್ಟುಕೊಡಲಾಗಿದೆ. ಹೊಸದಾಗಿ ಗ್ರಾಮ ಪಂಚಾಯಿತಿಗೆ 2 ಕೊಳವೆಬಾವಿಯನ್ನು ಸಂಬಂಧಿಸಿದವರು ಕೊರೆಯಿಸಿ ಕೊಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ಹೇಳಿದರು.
 
‘ಕ್ಯೂರಿಂಗ್‌ ಮಾಡಲು ನೀರು ತುಂಬಿಸಲಾಗಿದೆ, ದೊಡ್ಡ ಟ್ಯಾಂಕ್‌ಗಳಲ್ಲಿ ಸ್ವಲ್ಪ ಮಟ್ಟದಲ್ಲಿ ಮೊದಲ ದಿನಗಳಲ್ಲಿ ಸೋರಿಕೆಯಾಗುತ್ತದೆ. ನಂತರ ದಿನಗಳಲ್ಲಿ ನೀರು ಸೋರಿಕೆ ನಿಲ್ಲುತ್ತದೆ. ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಟ್ಯಾಂಕ್‌ ಅನ್ನು ಪರಿಶೀಲನೆ ನಡೆಸಿದ್ದೇನೆ ಎಂದು ಜಿಲ್ಲಾ ಪಂಚಾಯಿತಿಯ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಪ್ರಕಾಶ್ ಸ್ವಷ್ಟಪಡಿಸಿದ್ದಾರೆ. 
 
* ಮೂರು, ನಾಲ್ಕು ದಿನಗಳಲ್ಲಿ ಟ್ಯಾಂಕ್‌ನಲ್ಲಿ ಸೋರಿಕೆಯಾಗುತ್ತಿರುವ ನೀರು ನಿಲ್ಲುತ್ತದೆ.
- ಪ್ರಕಾಶ್, ಹಾಸನ ಜಿ.ಪಂ. ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.