ADVERTISEMENT

ಎಪಿಎಂಸಿ: ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:43 IST
Last Updated 12 ಜನವರಿ 2017, 6:43 IST

ಹಾಸನ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಜ.12 ರಂದು  ಮತದಾನ ನಡೆಯಲಿದ್ದು,  ಜಿಲ್ಲಾಡಳಿತ ಅಂತಿಮ ಹಂತದ ಸಿದ್ಧತೆ ಕೈಗೊಂಡಿದೆ. 
ಹಾಸನ, ಆಲೂರು, ಸಕಲೇಶಪುರ, ಚನ್ನರಾಯಪಟ್ಟಣ ಮತ್ತು ಬೇಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 442 ಮತಗಟ್ಟೆ ಸ್ಥಾಪಿಸಲಾಗಿದೆ.

ಹಾಸನ, ಆಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 14 , ಚನ್ನರಾಯ ಪಟ್ಟಣ 14, ಬೇಲೂರು 14 ಹಾಗೂ ಸಕಲೇಶಪುರ ತಾಲ್ಲೂಕಿನ 12 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.

ಸಕಲೇಶಪುರ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 13 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿತ್ತು. ಆದರೆ, ನ್ಯಾಯಾಲಯವು ಸಕಲೇಶಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘ ಕ್ಷೇತ್ರದ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೀಗಾಗಿ, ಇಲ್ಲಿ 12 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಲಿದೆ

ಸಂತೆ ಮತ್ತು ಜಾತ್ರೆ ನಿಷೇಧ: ಜಿಲ್ಲೆಯಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಮತ್ತು ಮತಗಟ್ಟೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಂತೆ ಮತ್ತು ಜಾತ್ರೆ ನಿಷೇಧಿಸಲಾಗಿದೆ.

ಹಾಸನ, ಆಲೂರು, ಬೇಲೂರು, ಚನ್ನರಾಯಪಟ್ಟಣ ಹಾಗೂ ಸಕಲೇಶ ಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಜ.11ರ ಸಂಜೆ 6ರಿಂದ 12ರ  ಮಧ್ಯರಾತ್ರಿ 12 ಗಂಟೆಯವರೆಗೆ  ಚುನಾವಣೆ ಘೋಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ  ಸರ್ಕಾರಿ, ಖಾಸಗಿ ಅಂಗಡಿ,  ಡಾಬಾ,  ಬಾರು,  ಹೋಟೆಲ್‌, ರೆಸ್ಟೋರೆಂಟ್,  ಮದ್ಯ ದಂಗಡಿಗಳಲ್ಲಿ ಮದ್ಯ ಮಾರಾಟ  ಹಾಗೂ ಮದ್ಯ ಸೇವನೆ ನಿಷೇಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮತದಾನ ಸುಗಮ ಮತ್ತು ಶಾಂತಿಯುತವಾಗಿ ನಡೆಸಲು ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ  ಬೆಳಿಗ್ಗೆ 6 ರಿಂದ  ಮಧ್ಯರಾತ್ರಿ 12 ರವರೆಗೆ ಮತಗಟ್ಟೆಯ ವ್ಯಾಪ್ತಿಯಲ್ಲಿ  ಸೆ. 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪು ಗಾರಿಕೆ ನಡೆಸುವುದು, ಆಯುಧ, ಶಸ್ತ್ರಾಸ್ತ್ರ ಮತ್ತು ಮಾರಕಾಸ್ತ್ರ  ಹೊತ್ತು ತಿರುಗುವುದನ್ನು ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನ್ವಯಿಸುವುದಿಲ್ಲ. ಜ.14 ರಂದು ಮತ ಎಣಿಕೆ ನಡೆಯಲಿದ್ದು, ಅಗತ್ಯ ಬಂದೋಬಸ್ತ್  ಕಲ್ಪಿಸಲಾಗು ವುದು ಎಂದು ಅವರು ತಿಳಿಸಿದ್ದಾರೆ.

ಆಲೂರು ವರದಿ: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎರಡು ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ ಎಂದು ತಹಶೀಲ್ದಾರ್ ಕೆ.ಎನ್.ಶಾರದಾಂಬ ತಿಳಿಸಿದರು.

ಆಲೂರು ತಾಲ್ಲೂಕಿನ ಕಸಬಾ ಕ್ಷೇತ್ರ (ಸಾಮಾನ್ಯ)ದಿಂದ ಬಿ.ಎಂ.ಪ್ರಕಾಶ್, ಕೆ.ಎಸ್.ಮಂಜೇಗೌಡ, ಎಚ್.ಸಿ.ಶಾಂತ ಕೃಷ್ಣ, ಎ.ಜಿ.ಶೋಭಾ ಅಜಿತ್ ಸ್ಪರ್ಧಿಸಿ ದ್ದರೆ, ಮಗ್ಗೆ ಕ್ಷೇತ್ರ (ಪರಿಶಿಷ್ಟ ಪಂಗಡ) ದಿಂದ ತಿಮ್ಮಯ್ಯ, ರಾಜನಾಯಕ, ರುದ್ರನಾಯಕ ಕಣದಲ್ಲಿದ್ದಾರೆ.

15 ಸೂಕ್ಷ್ಮ, 8 ಅತೀಸೂಕ್ಷ್ಮ, 8 ಸಾಮಾನ್ಯ ಸೇರಿ ಒಟ್ಟು 31 ಮತಗಟ್ಟೆ ತೆರೆಯಲಾಗಿದೆ. 18,149 ಪುರುಷರು ಹಾಗೂ 5,270 ಮಹಿಳೆಯರು ಸೇರಿ ಒಟ್ಟು 23,419 ಮತದಾರರಿದ್ದಾರೆ.

ಮತಗಟ್ಟೆ ಸುತ್ತ 100 ಮೀ. ಒಳಗೆ ಚುನಾವಣಾ ಪ್ರಚಾರ ನಿಷೇಧಿಸಲಾ ಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.