ADVERTISEMENT

ಏಳು ಸರಗಳ್ಳರ ಬಂಧನ, ಆಭರಣ ವಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2017, 9:09 IST
Last Updated 18 ಜೂನ್ 2017, 9:09 IST

ಹಾಸನ: ವಿವಿಧೆಡೆ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯರ ಸರ ಕಳವು ಮಾಡುತ್ತಿದ್ದ ಏಳು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ. ಮಾರುಕಟ್ಟೆ ಹತ್ತಿರದ ನಿವಾಸಿ ಮಹಮದ್‌ ಮುದಸೀರ್, ಹಳೇ ಮಟನ್‌ ಮಾರುಕಟ್ಟೆ  ಹತ್ತಿರದ ಮುದಸೀರ್‌ ಅಹಮದ್‌, ಶಾಹಿ ಮಸೀದಿ ಹಿಂಭಾಗದ ಶಾಕಿಬ್‌, ಆದರ್ಶ ನಗರದ ಸುಹೇಬ್‌ ಖಾನ್‌, ಚಿಪ್ಪಿನ ಕಟ್ಟೆಯ ಫೈರೋಜ್‌, ಇಲಾಹಿ ನಗರದ ಶಾಹಿದ್‌ ಮತ್ತು ಪೆನ್‌ಷನ್‌ ಮೊಹಲ್ಲಾದ ಮಹಮದ್‌ ಅಪ್ಲಲ್‌ರನ್ನು ಬಂಧಿತರು.

ಇವರಿಂದ 300 ಗ್ರಾಂ ತೂಕದ ₹ 8,25 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಐದು ಬೈಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ರಾಹುಲ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಕಳೆದ ವರ್ಷ ದಾಖಲಾಗಿದ್ದ 21 ಸರಕಳವು ಪ್ರಕರಣವನ್ನು ಭೇದಿಸಲಾಗಿದೆ. ಪ್ರಸ್ತಕ ವರ್ಷ 11 ಸರಗಳ್ಳತನ ಪ್ರಕರಣ ದಾಖಲಾಗಿದೆ. ಏಳು ಆರೋಪಿಗಳನ್ನು ಬಂಧಿಸುವ ಮೂಲಕ 9 ಪ್ರಕರಣ ಪತ್ತೆ ಮಾಡಲಾಗಿದೆ.

ಉಳಿದ ಎರಡು ಪ್ರಕರಣಗಳಲ್ಲಿ ಹೊರ ರಾಜ್ಯದ ತಂಡದ ಕೈವಾಡವಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿವರಿಸಿದರು. ಹಣ್ಣಿನ ವ್ಯಾಪಾರ, ವೆಲ್ಡಿಂಗ್, ಚಿನ್ನ–ಬೆಳ್ಳಿ ಪಾಲಿಷ್‌ ಮತ್ತು ಗುಜರಿ ವ್ಯಾಪಾರ ಮಾಡಿಕೊಂಡಿರುವ ಆರೋಪಿಗಳು ಮೊದಲ ಬಾರಿಗೆ ಸರಗಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದಿನನಿತ್ಯದ ಖರ್ಚಿಗೆ ಹಣ ಹೊಂದಿಸಲು ಈ ರೀತಿ ಮಾಡಿದ್ದಾರೆ ಎಂದು ಅವರು ವಿವರಿಸಿದರು.

ADVERTISEMENT

ಇವರಲ್ಲಿ ಮಹಮದ್‌ ಅಪ್ಲಲ್‌ ವಿರುದ್ಧ ವರ್ಷದ ಹಿಂದೆ ತಾಮ್ರ ಕಳವು ಪ್ರಕರಣ ದಾಖಲಾಗಿತ್ತು. ಖಾಕಿಬ್‌ ಮತ್ತು ಶಾಹಿದ್‌ ಅವರು ಇತರರು ಕಳವು ಮಾಡಿ ತರುತ್ತಿದ್ದ ಆಭರಣಗಳನ್ನು ಕೊಂಡುಕೊಳ್ಳುತ್ತಿದ್ದರು. ಅಲ್ಲದೇ ಕಳ್ಳತನ ಮಾಡುವ ಪ್ರದೇಶ ತೋರಿಸುತ್ತಿದ್ದರು. ಕೆಲವು ಕೃತ್ಯ ನಡೆದಾಗ ಸ್ಥಳದಲ್ಲಿಯೂ ಇದ್ದರು ಎಂಬುದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದರು.

ಅಪಘಾತ ಹಾಗೂ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು  ನಗರದ ಆಯ್ದ ಸ್ಥಳಗಳಲ್ಲಿ  ಹೆಚ್ಚುವರಿಯಾಗಿ 14 ಹಾಗೂ ಸಕಲೇಶಪುರದಲ್ಲಿ 4 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.  ವಾಹನಗಳ ನಂಬರ್‌ ಸೆರೆ ಹಿಡಿಯಲು ಆರು ಸಿಸಿಟಿವಿ ಕ್ಯಾಮೆರಾ ಹಾಕಲಾಗುತ್ತಿದೆ ಎಂದು ನುಡಿದರು.

ಹೊಳೆನರಸೀಪುರ ಯುವತಿ ಅಪಹರಣ ಪ್ರಕರಣದಲ್ಲಿ ಎಂಟು ಮಂದಿ ಭಾಗಿಯಾಗಿದ್ದು, ಮೋಹನ್‌ ಮತ್ತು  ಆತನ ಸಹಚರನನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಉಳಿದವರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು. ಮೋಹನ್‌ ವಿರುದ್ಧ  ದಾಖಲಾಗಿದ್ದ ಬಸನಹಳ್ಳಿ ಪ್ರಕರಣದ ವಿಚಾರಣೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ರಾಹುಲ್ ಹೇಳಿದರು.
ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜ್ಯೋತಿ ವೈದ್ಯನಾಥನ್‌, ಡಿಎಸ್‌ಪಿ ಎಂ.ಎನ್‌.ಶಶಿಧರ್‌, ಸಿಪಿಐ ಸತ್ಯನಾರಾಯಣ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಸುರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.