ADVERTISEMENT

ಕನಸು ಹೊತ್ತು ಬಂದ ಉದ್ಯೋಗಾಕಾಂಕ್ಷಿಗಳು

ಮೇಳದಲ್ಲಿ ಪಾಲ್ಗೊಂಡ ಬೆಂಗಳೂರಿನ ಹೆಸರಾಂತ ಕಂಪೆನಿಗಳು; ನೇಮಕಾತಿ ಯೋಜನೆಗಳ ಬಗ್ಗೆ ವಿವರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 11:12 IST
Last Updated 11 ಜುಲೈ 2017, 11:12 IST

ಹಾಸನ: ಎಂಟನೇ ತರಗತಿ,  ಪಿ.ಯು., ಬಿ.ಎ, ಬಿ.ಎಸ್‌.ಸಿ, ಎಂ.ಎಸ್‌.ಸಿ, ಐಟಿಐ, ಬಿ.ಇಡಿ, ಎಂಕಾಂ ಹಾಗೂ ಎಂಜಿನಿಯರಿಂಗ್‌ ಸೇರಿದಂತೆ ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅಂಕಪಟ್ಟಿ ಹಾಗೂ ಸ್ವವಿವರಗಳ ಅರ್ಜಿ ಹಿಡಿದು ಸೋಮವಾರ ನಡೆದ ಉದ್ಯೋಗ ಮೇಳದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ,  ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಹಾಗೂ ಮತ್ತು ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ  ಅಂಬೇಡ್ಕರ್ ಭವನದಲ್ಲಿ ನಡೆದ ಉದ್ಯೋಗ ಮೇಳಕ್ಕೆ  ಸಾವಿರಾರು ಮಂದಿ ಉದ್ಯೋಗದ ಕನಸು ಹೊತ್ತು  ಬಂದಿದ್ದರು.

ಸ್ವಯಂ ಉದ್ಯೋಗ ಕಲ್ಪಿಸುವ ಎಲೆಕ್ಟ್ರಿಕಲ್‌ ಹೌಸ್‌ ವೈರಿಂಗ್‌, ಮೋಟಾರ್‌ ರಿವೈಂಡಿಂಗ್‌, ಪಂಪ್‌ಸೆಟ್‌ ಹಾಗೂ ಜನರೇಟರ್‌ ರಿಪೇರಿ, ಎಲ್‌ಇಡಿ, ಎಲ್‌ಸಿಡಿ, ಡಿವಿಡಿ ರಿಪೇರಿ, ಬ್ಯೂಟಿ ಪಾರ್ಲರ್‌, ಹಸು ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ, ಕುರಿ,ಕೋಳಿ, ಜೇನು ಸಾಕಾಣಿಕೆ, ಅಣಬೆ ಬೇಸಾಯ, ಮೇಣದ ಬತ್ತಿ ತಯಾರಿಕೆ, ದ್ವಿಚಕ್ರ ವಾಹನ ದುರಸ್ತಿ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ,  ಮೊಬೈಲ್‌ ರಿಪೇರಿ ತರಬೇತಿ ನೀಡಲಾಗುತ್ತದೆ.  ಬೆಂಗಳೂರಿನ ಹೆಸರಾಂತ ಕಂಪೆನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು.

ADVERTISEMENT

ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಚ್. ಎಸ್.ಪ್ರಕಾಶ್,  ಪ್ರತಿಯೊಬ್ಬರು ಉದ್ಯೋಗ ಪಡೆಯಲು ವೃತ್ತಿ ಕೌಶಲಗಳನ್ನು ಬೆಳೆಸಿಕೊಳ್ಳಬೇಕು.  ಗಾರ್ಮೆಂಟ್ಸ್ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಉದ್ಯೋಗಾವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ಮುಂದಿನ ದಿನಗಳಲ್ಲಿ ಉದ್ಯೋಗ ಮೇಳವನ್ನು  ಹೋಬಳಿ ಮಟ್ಟದಲ್ಲಿ ನಡೆಸಲು ಅಗತ್ಯ ಕ್ರಮ ವಹಿಸಲಾಗುವುದು. ಇದರಿಂದ ಇನ್ನಷ್ಟು ಹೆಚ್ಚಿಸಿ ಗ್ರಾಮೀಣ ಯುವ ಜನತೆಗೆ ಉದ್ಯೋಗ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ  ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ.ಸತೀಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿದ್ಧರಾಜು ಅವರು  ದೀನ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆಯ ಉದ್ಯೋಗ ಹಾಗೂ ಅನುಕೂಲಗಳ ಬಗ್ಗೆ ವಿವರಿಸಿದರು.

ಕೆನರಾಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಪ್ರತಿನಿಧಿ ರಂಗಸ್ವಾಮಿ, ಕಿಯೊನಿಕ್ಸ್‌   ಸಂಸ್ಥೆಯ ಕೃಷ್ಣಮೂರ್ತಿ, ಕೆ.ಆರ್.ಪಿ.ಮಿಲ್‌ನ ಪ್ರತಿನಿಧಿ ಶೈಲಾ ತರಬೇತಿ, ನೇಮಕಾತಿ ಯೋಜನೆಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ನಗರಸಭೆ ಸದಸ್ಯ ಶಂಕರ್, ಕಾರ್ಮಿಕ ಅಧಿಕಾರಿ ಜಯಪ್ರಕಾಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.