ADVERTISEMENT

ಕಾಂಗ್ರೆಸ್ ಗೆಲ್ಲಲ್ಲ; ಜೆಡಿಎಸ್‌ಗೆ ಬೆಂಬಲವಿಲ್ಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 8:59 IST
Last Updated 29 ನವೆಂಬರ್ 2017, 8:59 IST

ಅರಕಲಗೂಡು: ‘ಗುಜರಾತ್ ಚುನಾವಣೆಯಷ್ಟೆ ಅಲ್ಲ, ರಾಜ್ಯದಲ್ಲೂ ಬಿಜೆಪಿ 2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುವುದು ಖಚಿತ’ ಎಂದು ವಿಧಾನಸಭೆ ವಿರೋಧಪಕ್ಷದ ಉಪ ನಾಯಕ ಆರ್. ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಅಭಿವೃದ್ಧಿ ಕಡೆಗಣಿಸಿ ನಿದ್ರೆಯಲ್ಲೇ ಕಾಲ ಕಳೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸುಳ್ಳನ್ನು ಸತ್ಯ ಎಂದು ಸಾಧಿಸುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಾತಿ, ಪಂಗಡಗಳ ನಡುವೆ ವೈಷಮ್ಯ ತಂದು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ವೀರಶೈವ –ಲಿಂಗಾಯಿತರ ನಡುವೆ ಭಿನ್ನಾಭಿಪ್ರಾಯ ತಂದಂತೆ ನಾಳೆ ಒಕ್ಕಲಿಗರ ಮಧ್ಯೆಯೂ ಒಡಕು ತರಬಹುದು. ಈ ಕುರಿತು ಎಚ್ಚರ ಅಗತ್ಯ ಎಂದು ಲೇವಡಿಯಾಡಿದರು.

ADVERTISEMENT

ಅನ್ನಭಾಗ್ಯ, ಎಲ್ಇಡಿ ಬಲ್ಬ್ ಸೇರಿ ಅನೇಕ ಜನಪರ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ. ಆದರೆ, ರಾಜ್ಯ ಸರ್ಕಾರ ಇವು ತಮ್ಮದೇ ಯೋಜನೆಗಳು ಎಂದು ಬಿಂಬಿಸಿಕೊಂಡು ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಡಿಎಸ್ ನಾಯಕರಿಗೆ ಜನಬೆಂಬಲವಿಲ್ಲ. ಚುನಾವಣೆಯಲ್ಲಿ 25ರಿಂದ 30 ಸ್ಥಾನ ಪಡೆದು ಸಮ್ಮಿಶ್ರ ಸರ್ಕಾರ ರಚಿಸಿ ಆಡಳಿತ ನಡೆಸುವ ಕನಸು ಕಾಣುತ್ತಿದ್ದಾರೆ. ಜನತೆಗೆ ಸಮ್ಮಿಶ್ರ ಸರ್ಕಾರದ ಕುರಿತು ಒಲವಿಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸಿ ಪೊಲೀಸರ ಕಾವಲಿನಲ್ಲಿಕಾರಿನಲ್ಲಿ ಸುತ್ತುತ್ತಿರುವುದೆ ಇವರ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಯೋಗಾ ರಮೇಶ್ ಅವರು, 30 ವರ್ಷಗಳಿಂದ ಸಚಿವ ಎ.ಮಂಜು ಮತ್ತು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರಿಂದಾಗಿ ಕ್ಷೇತ್ರ ಅಭಿವೃದ್ಧಿ ಕಾಣದೆ ಹಿಂದುಳಿದಿದೆ ಎಂದು ಆರೋಪಿಸಿದರು.

ಈ ಭಾಗದಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಎಚ್.ಡಿ. ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಾ ತಾಲ್ಲೂಕಿನ ಪ್ರಗತಿ ಕಾರ್ಯಗಳಿಗೆ ಕೈ ಜೋಡಿಸದೆ ಮಲತಾಯಿ ಧೋರಣೆ ಆನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಾಜಿ ಶಾಸಕ ಬಿ.ವಿ. ಕರೀಗೌಡ, ಪಕ್ಷದ ರಾಜ್ಯ ರೈತಮೋರ್ಚಾ ಕಾರ್ಯದರ್ಶಿ ರೇಣುಕುಮಾರ್ ಮಾತನಾಡಿದರು.

ಮುಖಂಡರಾದ ಎಂ.ಟಿ. ಸತ್ಯನಾರಾಯಣ, ಹುಲ್ಲಳ್ಳಿ ಸುರೇಶ್, ಪ್ರೀತಂ ಜೆ. ಗೌಡ, ಕಟ್ಟಾಯ ಅಶೋಕ್‌, ಶಿವನಂಜೇಗೌಡ, ಬೊಮ್ಮೇಗೌಡ, ಬಿ.ಸಿ. ರಾಜೇಶ್, ವಿಶ್ವನಾಥ್, ತೀರ್ಥೇಶ್ ಬಾಬು ಉಪಸ್ಥಿತರಿದ್ದರು.

ಚನ್ನರಾಯಪಟ್ಟಣದ ಉದ್ಯಮಿ ನವೀನ್ ಶಂಕರ್ ಅವರು ಅಶೋಕ್ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಇದಕ್ಕೂ ಮುನ್ನ ಕಾರ್ಯಕರ್ತರು ಕಾರ್ಯಕ್ರಮದ ವೇದಿಕೆವರೆಗೆ ಮೆರವಣಿಗೆ ನಡೆಸಿ ಪಕ್ಷ ಹಾಗೂ ಮುಖಂಡರ ಪರ ಘೋಷಣೆ ಕೂಗಿದರು. ವಿವಿಧ ಮುಖಂಡರು ಹಾಜರಿದ್ದರು.

‘ಚಂಪಾ ಸರ್ಕಾರದ ಏಜೆಂಟ್’
ಸಾಹಿತಿ ಚಂದ್ರಶೇಖರ ಪಾಟೀಲ ಅವರು ಸರ್ಕಾರದ ಏಜೆಂಟರಂತೆ ವರ್ತಿಸುವ ಮೂಲಕ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್‌ ಆರೋಪ ಮಾಡಿದರು.

ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಅವರು ರಾಜಕೀಯ ಭಾಷಣ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.