ADVERTISEMENT

ಕಾನೂನು ಅರಿವಿಗೆ ರಥಯಾತ್ರೆ ಸಹಕಾರಿ

ಹಿರಿಯ ನ್ಯಾಯಾಧೀಶರಾದ ಈ.ಚಂದ್ರಕಲಾ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:16 IST
Last Updated 29 ಆಗಸ್ಟ್ 2016, 11:16 IST

ಅರಸೀಕೆರೆ: ಗ್ರಾಮೀಣ ಪ್ರದೇಶದ ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆ ಯಶಸ್ವಿಯಾಗಿದೆ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಇಲ್ಲಿನ ಜೆಎಂಎಫ್‌ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಈ.ಚಂದ್ರಕಲಾ ತಿಳಿಸಿದರು.

ನಗರದ ಜೆಎಂಎಫ್‌ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಕಾನೂನು ಸಾಕ್ಷರತಾ ರಥಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಜನ ಸಾಮಾನ್ಯರಲ್ಲಿ ಕಾನೂನುಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದ ಕಾರಣ ವಿವಿಧ ಸಮಸ್ಯೆ ಅನುಭವಿಸುವ ಜತೆಗೆ, ಇಲ್ಲ ಸಲ್ಲದ ವ್ಯಾಜ್ಯಗಳಿಗೆ ತಮ್ಮ ಅಮೂಲ್ಯ ಸಮಯ ಮತ್ತು ಹಣ ವ್ಯರ್ಥ ಮಾಡುತ್ತಿದ್ದಾರೆ. ಇವೆಲ್ಲದರ ಪರಿಣಾಮ ನ್ಯಾಯಾಲಯಗಳಲ್ಲಿ ಸಣ್ಣಪುಟ್ಟ ವ್ಯಾಜ್ಯಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಕೆಲವು ಅಪರಾಧ ಪ್ರಕರಣಗಳ ಇತ್ಯರ್ಥ್ಯಕ್ಕೆ ತುಂಬಾ ಸಮಯ ತೆಗೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಕಾನೂನು ಸಾಕ್ಷರತಾ ರಥಯಾತ್ರೆ ಗ್ರಾಮೀಣ ಭಾಗದಲ್ಲಿ ನಾಲ್ಕು ದಿನ ಸಂಚರಿಸಲಿದ್ದು, ಗಂಡಸಿ ಹೋಬಳಿಯ ಬಾಗೇಶಪುರ, ನೀರಗುಂದ, ಕಸಬಾ ಹೋಬಳಿ ಮುರುಂಡಿ, ಆ. 29ರಂದು ಜಾವಗಲ್‌ ಹೋಬಳಿಯ ಜಾವಗಲ್‌, ಕೋಳುಗುಂದ, ಗೊಲ್ಲರಹಟ್ಟಿ, ಕರುಗುಂದ, ಗ್ರಾಮಗಳಲ್ಲಿ ಸಂಚರಿಸಿ ವಿವಿಧ ಕಾನೂನುಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಲಾಗುವುದು. ಆ. 30ರಂದು ನಗರದ ಪದವಿ ಪೂರ್ವ ಕಾಲೇಜು, ನಗರಸಭಾ ಕಚೇರಿ, ಮತ್ತು ತಾ.ಪಂ ಕಚೇರಿ ಆವರಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಸಂಯೋಜನೆ ಮಾಡಲಾಗಿದೆ ಎಂದು  ವಿವರಿಸಿದರು.

ವಕೀಲರ ಗೈರು: ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎನ್‌.ರವಿ ಮಾತನಾಡಿದರು. ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಸಂದೇಶಪ್ರಭು, ಯಶವಂತ್‌ಕುಮಾರ್‌, ಡಿವೈಎಸ್‌ಪಿ ದಶರಥಮೂರ್ತಿ,  ಯಶೋದಾ, ಆದಿಹಳ್ಳಿ ಲೋಕೇಶ್‌, ನಗರ ಪೊಲೀಸ್‌ ಠಾಣೆಯ ಸಿಪಿಐ ನಿರಂಜನ್‌ ಕುಮಾರ್‌, ವಿಜಯ್‌ಕುಮಾರ್‌, ಸಿ.ನಟರಾಜ್‌, ಜಿ.ಆರ್‌.ಕೆಂಪೇಗೌಡ, ಎಸ್‌.ಎನ್‌. ಅಶೋಕ್‌ ಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.