ADVERTISEMENT

ಕುಡಿಯುವ ನೀರು ಪೂರೈಕೆಗೆ ₹ 600 ಕೋಟಿ

ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ ಸಂಸದ ಎಚ್‌.ಡಿ.ದೇವೇಗೌಡ: ನಗರಸಭೆ ಅಧ್ಯಕ್ಷ ಅನಿಲ್‌ಕುಮಾರ್ ವಿವರಣೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 7:24 IST
Last Updated 7 ಮಾರ್ಚ್ 2017, 7:24 IST
ಹಾಸನ: ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಸಮರ್ಪಕ ಕುಡಿಯಲು ಪೂರೈಸಲು ₹  600 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಂಸದ ಎಚ್.ಡಿ.ದೇವೇಗೌಡ ಅವರು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಡಾ.ಎಚ್.ಎಸ್.ಅನಿಲ್‌ಕುಮಾರ್ ಹೇಳಿದರು.
 
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದರು ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಮೂರು ಹಂತದ ಕುಡಿಯುವ ನೀರು ಯೋಜನೆಗೆ  ₹ 600 ಕೋಟಿ ಅನುದಾನ ನೀಡುವ ಭರವಸೆ ನೀಡಲಾಗಿತ್ತು. ಆ ನಂತರ ಬಂದ ಎನ್‌ಡಿಎ ಸರ್ಕಾರ ಯೋಜನೆ ರದ್ದು ಮಾಡಿ ಅಮೃತ್ ಯೋಜನೆಯಡಿ ₹ 119 ಕೋಟಿ ನೀಡಿತು ಎಂದು ಹೇಳಿದರು.
 
ಕಡಿಮೆ ಮೊತ್ತದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಅರಿತ ಸಂಸದ ದೇವೇಗೌಡರು, ನಗರದ ಜನರಿಗೆ ಮುಂದಿನ ಮೂವತ್ತು ವರ್ಷ ಅವಧಿಗೆ ನೀರು ಪೂರೈಸಲು ಬೃಹತ್‌ ಮೊತ್ತದ ಅನುದಾನ ನೀಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ವೆಂಕಯ್ಯ ನಾಯ್ಡು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
 
ಅಲ್ಲದೇ ಸ್ಮಾರ್ಟ್‌ ಸಿಟಿ ಯೋಜನೆಗೆ ಹಾಸನ ನಗರ ಸೇರಿಸಿ ₹ 200 ಕೋಟಿ  ಅನುದಾನ ನೀಡುವುದು ಹಾಗೂ ಜಿಲ್ಲಾ ಕ್ರೀಡಾಂಗಣದ (ಸಿಂಥೆಟಿಕ್‌ ಟ್ರ್ಯಾಕ್‌, ಹಾಕಿ ಟರ್ಫ್‌, ಪೆವಿಲಿಯನ್‌) ಅಭಿವೃದ್ಧಿಗೆ ₹ 15 ಕೋಟಿ ಬಿಡುಗಡೆ ಮಾಡುವಂತೆ ಕೋರಲಾಗಿದೆ. ಗೊರೂರು ಜಲಾಶಯದಿಂದ ನಗರಕ್ಕೆ ನಿರಂತರ ನೀರು ಪೂರೈಸುವ ಅಮೃತ್ ಯೋಜನೆಗೆ ಈಗಾಗಲೇ ₹ 117 ಕೋಟಿ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.
 
ರಸ್ತೆ, ಒಳಚರಂಡಿ, ವಿದ್ಯುತ್, ಉದ್ಯಾನ, ಹೈಟೆಕ್‌ ಮಾರುಕಟ್ಟೆ, ಗುಣಮಟ್ಟದ ಪಾದಚಾರಿ ಮಾರ್ಗ ಹಾಗೂ ಇತರ ಕಾಮಗಾರಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ಸಹ್ಯಾದ್ರಿ ವೃತ್ತದಿಂದ ಮಲೆನಾಡು ಕಾಲೇಜು, ಹೊಸ ಬಸ್ ನಿಲ್ದಾಣ ರಸ್ತೆಯನ್ನು ಚತುಷ್ಪಥ ಮಾಡಲಾಗುವುದು. ನಗರದ ಎವಿಕೆ ಕಾಲೇಜು ರಸ್ತೆಯನ್ನು ಮಹಾವೀರ ವೃತ್ತದಿಂದ ಚರ್ಚ್‌ವರೆಗೆ ವಿಸ್ತರಿಸಲಾಗುವುದು. ಆದರೆ, ಕಾಮಗಾರಿಗೆ ಯಾವುದೇ ಕಟ್ಟಡ ನೆಲಸಮ ಮಾಡುವ ಅಗತ್ಯವಿಲ್ಲ.  ಮಹಾರಾಜ ಉದ್ಯಾನ ಕಾಂಪೌಂಡ್ ಅಭಿವೃದ್ಧಿ ಹಾಗೂ ರಸ್ತೆ ಕೆಲಸ ಸೇರಿ ₹ 55 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.  
 
ನಗರಕ್ಕೆ ಪ್ರತಿನಿತ್ಯ 24 ಎಂಎಲ್‌ಡಿ ಕುಡಿಯುವ ನೀರಿನ ಅಗತ್ಯವಿದ್ದು, ಕೇವಲ 8 ಎಂಎಲ್‌ಡಿ ಮಾತ್ರ ದೊರೆಯುತ್ತಿದೆ. ಹೇಮಾವತಿ ಜಲಾಶಯದ ನೀರನ್ನು ನದಿಗೆ ಹರಿಯಬಿಟ್ಟಿದ್ದರಿಂದ ಸಮಸ್ಯೆಯಾಗುತ್ತಿದೆ. ಅಣೆಟ್ಟೆಯಿಂದ ಕೇವಲ 8 ವಾರ್ಡ್‌ಗಳಿಗೆ ಮಾತ್ರ ನೀರು ಪೂರೈಸಲಾಗುತ್ತಿದೆ. ಯಗಚಿ ಜಲಾಶಯದಿಂದ 8 ರಿಂದ 10 ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಬಹುದು. ಉಳಿದ ವಾರ್ಡ್‌ಗಳಿಗೆ ಟ್ಯಾಂಕರ್ ಅಥವಾ ಕೊಳವೆ ಬಾವಿ ಮೂಲಕ ಪೂರೈಸಲಾಗುವುದು ಎಂದರು.
 
ನಗರ ವ್ಯಾಪ್ತಿಯಲ್ಲಿರುವ ಜವೇನಹಳ್ಳಿ ಕೆರೆ ಸಂರಕ್ಷಣೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕಾಮಗಾರಿಗೆ ₹ 2 ಕೋಟಿ ಅನುದಾನವನ್ನು ನಗರಾಭಿವೃದ್ಧಿ ಪ್ರಾಧಿಕಾರ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕೆಲಸ ಪ್ರಾರಂಭಿಸಲಾಗುವುದು. ನಗರದಾದ್ಯಂತ ಕೊರೆಸಿದ 104 ಕೊಳವೆಬಾವಿ ಪೈಕಿ 35 ವಿಫಲವಾಗಿವೆ.

ಉಳಿದ 69 ಕೊಳವೆ ಬಾವಿಗಳಲ್ಲಿ ಶೇ 20ರಷ್ಟು ನೀರಿನ ಕೊರತೆ ಕಾಡುತ್ತಿದೆ. ನಗರಸಭೆಯ 10 ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಲೀಲಾ ವಾಸುದೇವ್, ಸದಸ್ಯ ಗೋಪಾಲ್ ಹಾಗೂ ಶ್ರೇಯಸ್ ಇದ್ದರು.
 
* ಹನಿ ನೀರಿಗೂ ಪರದಾಡುತ್ತಿರುವ ಸಂದರ್ಭದಲ್ಲಿ ಖಾಸಗಿ ಕೊಳವೆ ಬಾವಿ ಮಾಲೀಕರು ನೀರು ಪೋಲು ಮಾಡುತ್ತಿರುವುದು ಸರಿಯಲ್ಲ
-ಎಚ್.ಎಸ್.ಅನಿಲ್‌ಕುಮಾರ್‌ ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.